ನವದೆಹಲಿ : ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಇದೇ ಸೆಪ್ಟೆಂಬರ್ 5 ರಂದು ನಡೆಯಲಿರುವ ಎಸ್ ಡಿ ಎ ಪರೀಕ್ಷೆಯನ್ನು ಮಹಿಳಾ ಅಭ್ಯರ್ಥಿಗಳು ಬರೆಯಬಹುದು ಎಂದು ಸುಪ್ರೀಂ ಆದೇಶಿಸಿದೆ.
ಭಾರತದ ರಕ್ಷಣಾ ಪಡೆಗಳಿಗೆ ಸೇರಲು ವಿಶೇಷ ತರಬೇತಿ ಒದಗಿಸುವ ಎನ್ಡಿಎ ದಾಖಲಾತಿಯು, ಈ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರ್ಟ್ ಕೈಗೊಳ್ಳಲಿರುವ ಅಂತಿಮ ನಿರ್ಣಯಕ್ಕೆ ಬದ್ಧವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಕೇವಲ ಲಿಂಗದ ಆಧಾರದ ಮೇಲೆ ಅರ್ಹ ಮತ್ತು ಆಸಕ್ತ ಯುವತಿಯರನ್ನು ಪ್ರತಿಷ್ಠಿತ ಎನ್ ಡಿಎ ಸೇರಲು ಅವಕಾಶ ನೀಡದಿರುವುದು ಭಾರತೀಯ ಸಂವಿಧಾನ ಖಾತ್ರಿಪಡಿಸುವ ಸಮಾನತೆಯ ಮೂಲ ಹಕ್ಕನ್ನು ಉಲ್ಲಂಘಿಸುತ್ತದೆ.
ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಯ ಪ್ರತಿಕ್ರಿಯೆ ಕೇಳಿದ್ದ ಕೋರ್ಟ್ ಗೆ ಇಂದು ಸೇನೆಯ ಪರ ವಕೀಲರು, ಕೇವಲ ಯುವಕರಿಗೆ ಪ್ರವೇಶ ತೆರೆದಿರುವುದು 'ಪಾಲಿಸಿ ಡಿಸಿಷನ್' ಆಗಿದೆ ಎಂದು ಹೇಳಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ, 'ಲಿಂಗ ತಾರತಮ್ಯ' ಮನೋಭಾವ ಬದಲಾಗಬೇಕಿದೆ. ಸೇನೆಯು ತಾನಾಗಿಯೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಹೊರಡಿಸುವ ಸನ್ನಿವೇಶ ತರಬೇಡಿ' ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಮತ್ತು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
PublicNext
18/08/2021 03:42 pm