ನವದೆಹಲಿ: ರೈತರ ಹೋರಾಟಕ್ಕೆ ಟೂಲ್ಕಿಟ್ ಒದಗಿಸಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದಿಶಾ ರವಿಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ.
ದಿಶಾ ರವಿ ಜಾಮೀನು ಕೋರಿ ದೆಹಲಿ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಫೆಬ್ರವರಿ 20ರಂದು ನಡೆಯಿತು. ಒಂದು ಗಂಟೆ ವಾದ ಪ್ರತಿವಾದವನ್ನು ಆಲಿಸಿ, ಹಲವಾರು ಕಠಿಣ ಪ್ರಶ್ನೆಗಳನ್ನು ಕೇಳಿದ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ, ತಮ್ಮ ಆದೇಶವನ್ನು ಮಂಗಳವಾರ (ಫೆಬ್ರವರಿ 23)ಕ್ಕೆ ಕಾಯ್ದಿರಿಸಿದ್ದಾರೆ.
ದಿಶಾ ರವಿ ವಕೀಲ ಸಿದ್ಧಾರ್ಥ್ ಅಗರ್ವಾಲ್, ''ಬೆಂಗಳೂರಿಗೆ ಸೇರಿದ 22 ವರ್ಷದ ದಿಶಾಗೆ ಪ್ರತ್ಯೇಕತಾವಾದಿಗಳೊಂದಿಗೆ ಯಾವುದೇ ಸಂಪರ್ಕವಿಲ್ಲ. ದಿಶಾರ ಚಾಟ್ಗಳು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್(ಪಿಜೆಎಫ್)ನೊಂದಿಗೆ ಇವೆ ಎಂದು ಹೇಳಲಾಗಿದೆ. ಆದರೆ ಅದು ನಿರ್ಬಂಧಿತ ಸಂಘಟನೆಯಲ್ಲ” ಎಂದರು.
ನ್ಯಾಯಾಧೀಶರು, ''ಆರೋಪಿ ಮತ್ತು ಜನವರಿ 26ರ ಹಿಂಸಾಚಾರದ ನಡುವೆ ಲಿಂಕ್ ತೋರಿಸಲು ನೀವು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು ಏನು? ಟೂಲ್ಕಿಟ್ನಲ್ಲಿ ಅವಳ ಪಾತ್ರವಿರುವ ಬಗ್ಗೆ ಮತ್ತು ಅವಳು ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ನೀವು ವಾದ ಮಾಡಿದ್ದೀರಿ…” ಎಂದು ಕೇಳಿದರು. ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ''ಸಾಂದರ್ಭಿಕ ಪುರಾವೆಗಳ ಮೇಲೆ ಮಾತ್ರ ಸಂಚನ್ನು ಕಾಣಬಹುಸು'' ಎಂದರು. ಈ ವೇಳೆ ನ್ಯಾಯಾಧೀಶರು, ''ಹಾಗಿದ್ದರೆ ದಿಶಾಳನ್ನು ಜನವರಿ 26ರ ಹಿಂಸಾಚಾರಕ್ಕೆ ಲಿಂಕ್ ಮಾಡುವ ಯಾವುದೇ ಪುರಾವೆ ನಿಮ್ಮ ಬಳಿ ಇಲ್ಲವೇ'' ಎಂದು ಮರುಪ್ರಶ್ನೆ ಹಾಕಿದರು.
''ಜನವರಿ 26 ರಂದು ವಸ್ತುತಃ ಕಾನೂನು ಉಲ್ಲಂಘನೆ ಮಾಡಿದವರೊಂದಿಗೆ ದಿಶಾರನ್ನು ಹೇಗೆ ಕನೆಕ್ಟ್ ಮಾಡುತ್ತೀರಿ ?” ಎಂದು ನ್ಯಾಯಾಧೀಶರು ಕೇಳಿದರು. “ಸಂಚಿನ ವಿಷಯದಲ್ಲಿ ಎಕ್ಸಿಕ್ಯೂಷನ್ ಮತ್ತು ಪ್ಲಾನಿಂಗ್ ಬೇರೆ ಬೇರೆಯಾಗಿರುತ್ತವೆ” ಎಂಬ ರಾಜು ಅವರ ಸ್ಪಷ್ಟನೆಗೆ ಮಣಿಯದ ನ್ಯಾಯಾಧೀಶರು, “ಹಾಗಿದ್ದರೆ ನೇರವಾದ ಲಿಂಕ್ ಇಲ್ಲ ಎಂದು ನಾನು ಅರ್ಥಮಾಡಿಕೊಳ್ಳಲೆ?” ಎಂದು ಕೇಳಿದರು.
ವಿಚಾರಣೆ ವೇಳೆ ನ್ಯಾಯಾಧೀಶರು, “ಟೂಲ್ಕಿಟ್ ಅಂದರೆ ಏನು ?” “ಅದು ಅಪರಾಧಿಕ ಕೃತ್ಯವೇ ?” ಎಂದು ದೆಹಲಿ ಪೊಲೀಸರನ್ನು ಪ್ರಶ್ನಿಸಿದರು. ಜನವರಿ 26ರ ಹಿಂಸಾಚಾರದಲ್ಲಿ ದಿಶಾ ಪಾತ್ರ ಹೊಂದಿದ್ದರು ಎಂಬುದು ಕೇವಲ “ಊಹೆ”ಯೇ ಎಂದೂ ಒಂದು ಹಂತದಲ್ಲಿ ಪ್ರಶ್ನಿಸಿದರು.
PublicNext
20/02/2021 11:09 pm