ಹೊಸದಿಲ್ಲಿ: ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಎರಡು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲ ಅವರ ಸೇವಾವಧಿಯನ್ನು ಸರ್ಕಾರ ಒಂದು ವರ್ಷ ಮೊಟಕುಗೊಳಿಸಿದೆ.
ಸುಪ್ರೀಂ ಕೋರ್ಟ್ ಕೊಲೀಜಿಯಂ ಈ ಹಿಂದೆ ಹೆಚ್ಚುವರಿ ನ್ಯಾಯಾಧೀಶೆಯಾಗಿ ಎರಡು ವರ್ಷ ಅವಧಿಗೆ ಶಿಫಾರಸು ಮಾಡಿದ್ದರೂ ಶುಕ್ರವಾರ ಅವರಿಗೆ ಒಂದು ವರ್ಷದ ಸೇವಾವಧಿಯನ್ನು ನೀಡಲಾಗಿದೆ. ಹೆಚ್ಚುವರಿ ನ್ಯಾಯಾಧೀಶೆಯಾಗಿ ಅವರ ಈ ಹಿಂದಿನ ಅವಧಿ ಶುಕ್ರವಾರ ಅಂತ್ಯಗೊಂಡ ನಂತರ ಇಂದಿನಿಂದ ಅವರಿಗೆ ಎರಡು ವರ್ಷ ಸೇವಾವಧಿ ಬದಲು ಒಂದು ವರ್ಷ ಸೇವಾವಧಿ ದೊರೆಯಲಿದೆ.
ಕಳೆದ ವಾರವಷ್ಟೇ ಅವರನ್ನು ಖಾಯಂ ನ್ಯಾಯಾಧೀಶೆಯನ್ನಾಗಿಸಲು ತಾನು ಈ ಹಿಂದೆ ನೀಡಿದ್ದ ಅನುಮೋದನೆಯನ್ನು ಕೊಲೀಜಿಯಂ ವಾಪಸ್ ಪಡೆದುಕೊಂಡಿತ್ತು. ಆದರೆ ಅವರಿಗೆ ಎರಡು ವರ್ಷ ಹೆಚ್ಚುವರಿ ನ್ಯಾಯಾಧೀಶೆಯಾಗಿ ಅವಕಾಶ ನೀಡಲು ಕೊಲೀಜಿಯಂ ಶಿಫಾರಸು ಮಾಡಿತ್ತು. ಆದರೆ ಶುಕ್ರವಾರ ಸರಕಾರ ಹೊರಡಿಸಿದ ಅಧಿಸೂಚನೆಯಂತೆ ಅವರಿಗೆ ಒಂದು ವರ್ಷ ಅವಧಿಗೆ ಹೆಚ್ಚುವರಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದೆ.
ಪ್ರಕರಣವೊಂದರಲ್ಲಿ ಅಪ್ರಾಪ್ತೆಯ ವಸ್ತ್ರದ ಮೇಲಿನಿಂದಲೇ ಆಕೆಯ ಎದೆ ಸವರುವುದು ಪೋಕ್ಸೋ ಅಡಿ ಲೈಂಗಿಕ ಹಲ್ಲೆ ಎನಿಸಿಕೊಳ್ಳುವುದಿಲ್ಲ ಎಂದು ಜಸ್ಟಿಸ್ ಗನೇಡಿವಾಲ ಹೇಳಿದ್ದರೆ ಮತ್ತೊಂದು ಪ್ರಕರಣದಲ್ಲಿ ಅಪ್ರಾಪ್ತೆಯ ಕೈಹಿಡಿದು ಹಾಗೂ ನಂತರ ಆರೋಪಿ ತನ್ನ ಪ್ಯಾಂಟ್ ಜಿಪ್ ತೆಗೆಯುವುದು ಕೂಡ ಪೋಕ್ಸೋ ಅಡಿ ಲೈಂಗಿಕ ದೌರ್ಜನ್ಯವೆನಿಸುವುದಿಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದರು.
PublicNext
13/02/2021 06:48 pm