ನವದೆಹಲಿ: ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ್‍ಯಾಲಿ ಕುರಿತು ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಮತ್ತು ಆರು ಜನ ಪತ್ರಕರ್ತರ ಬಂಧನಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ವಿಚಾರವಾಗಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹಾಗೂ ಆರು ಪತ್ರಕರ್ತರು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಇದೀಗ ಅವರ ಬಂಧನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಈ ಕುರಿತು ಎಲ್ಲಾ ಅರ್ಜಿಗಳ ಬಗ್ಗೆ ನೋಟಿಸ್ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು, ಬಾರ್ ಆ್ಯಂಡ್ ಬೆಂಚ್ ಹೇಳಿಕೆ ಉಲ್ಲೇಖಿಸಿ, ನಾವು ಎರಡು ವಾರಗಳ ನಂತರ ಈ ವಿಚಾರವಾಗಿ ವಿಚಾರಣೆ ನಡೆಸುತ್ತೇವೆ. ಏತನ್ಮಧ್ಯೆ ಬಂಧನಕ್ಕೆ ತಡೆ ನೀಡಲಾಗಿದೆ ಎಂದು ಹೇಳಿದರು.
ಶಶಿ ತರೂರ್, ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್‌ನ ಮ್ರಿಣಾಲ್ ಪಾಂಡೆ ಪಾಂಡೆ, ಕೌಮಿ ಆವಾಜ್‌ನ ಜಾಫರ್ ಆಘಾ, ದಿ ಕ್ಯಾರವನ್ ಸುದ್ದಿ ಸಮೂಹದ ಅನಂತ್ ನಾಥ್ ಮತ್ತು ವಿನೋದ್ ಜೋಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಸೆಕ್ಷನ್ 124 ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 120ಬಿ (ಮರಣದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕೆ ಅಪರಾಧ ಸಂಚು).ಸೇರಿದಂತೆ 11 ಐಪಿಸಿ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
PublicNext
09/02/2021 05:28 pm