ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಗಾರ್ಡನ್ ಸಿಟಿ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪುಗೂಡಿ ಸಂಭ್ರಮ ಆಚರಿಸಲು ಬ್ರೇಕ್ ಹಾಕಿರುವ ಬೆಂಗಳೂರು ಪೊಲೀಸರು ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೆಚ್ಚಾಗಿ ಸಂಭ್ರಮಾಚರಣೆ ನಡೆಯುವ ಎಂ.ಜಿ. ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ಇಂದು ಸಂಜೆ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರಸ್ತೆ ಸಂಪರ್ಕಿಸುವ ಪ್ರಮುಖ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ 12 ಕಡೆಗಳಲ್ಲಿ ನಾಕಾಬಂದಿ ಹಾಕಲು ಸಿದ್ಧತೆ ನಡೆಸಲಾಗಿದೆ. ಎಂ.ಜಿ.ರಸ್ತೆ ಸುತ್ತಮುತ್ತ 2 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಅನಗತ್ಯ ಓಡಾಟ, ಕಾನೂನುಬಾಹಿರ ವರ್ತನೆ ತೋರುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 56 ಹಾಗೂ ಐಪಿಸಿ 188ರ ಅಡಿಯಲ್ಲಿ ಬಂಧಿಸಲಾಗುವುದು. ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವವರನ್ನು ಬಂಧಿಸಲು 21 ಪಿಕಪ್ ಸ್ವ್ಕಾಡ್ ನಿಯೋಜಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
PublicNext
31/12/2020 09:52 pm