ಮುಂಬೈ: ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಅಪರಾಧವಲ್ಲ, ಮಹಿಳೆಗೆ ತನ್ನ ಕಸುಬು ಅಥವಾ ವೃತ್ತಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು ಇದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ಮುಂಬೈನ ಹಾಸ್ಟೆಲ್ ಒಂದರ ಮೇಲೆ ನಡೆದಿದ್ದ ದಾಳಿಯಲ್ಲಿ 20 ವರ್ಷ ವಯಸ್ಸಿನ ಮೂವರು ಲೈಂಗಿಕ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನು ಪ್ರಶ್ನಿಸಿ ಲೈಂಗಿಕ ಕಾರ್ಯಕರ್ತೆಯರು ಕೋರ್ಟ್ ಮೆಟ್ಟಿಲೇರಿದ್ದರು, 'ಮೂವರು ಮಹಿಳೆಯರು ವಯಸ್ಕರಾಗಿದ್ದಾರೆ. ಅವರು ಇಚ್ಚಿಸಿದಂತೆ ಬದುಕಲು, ಅವರು ಇಷ್ಟಪಟ್ಟ ವೃತ್ತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಿದ್ದಾರೆ. '1956ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ವೇಶ್ಯಾವಾಟಿಕೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿಲ್ಲ,' ಎಂದೂ ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್ ಅವರ ನೇತೃತ್ವದ ನ್ಯಾಯಪೀಠವು ಆದೇಶದ ವೇಳೆ ತಿಳಿಸಿದೆ.
ಇದೀಗ, ಬಾಂಬೆ ಉಚ್ಚ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು ಬಂಧನಕ್ಕೊಳಗಾಗಿರುವ ಮೂವರು ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ವಯಸ್ಕ ಮಹಿಳೆಯರು ಮುಕ್ತವಾಗಿ ಓಡಾಡಲು ಮತ್ತು ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ, ಆದರೆ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಯಾವುದೇ ವ್ಯಕ್ತಿಯನ್ನು ಮೋಸ ಮಾಡುವುದು, ಮಹಿಳೆಯೊಬ್ಬಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುವುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗುವುದು ಶಿಕ್ಷಾರ್ಹ ಅಪರಾಧ ಎಂದು ಬಾಂಬೆ ಉಚ್ಚ ನ್ಯಾಯಾಲಯ ಸ್ಪಷ್ಟನೆ ನೀಡಿದೆ.
PublicNext
27/09/2020 10:26 am