ದೆಹಲಿ: ಮುಸ್ಲಿಂ ಕಾನೂನು ಪ್ರಕಾರ, ʻಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಯುವತಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು. ಆಕೆ ಅಪ್ರಾಪ್ತಳಾಗಿದ್ದರೂ ಸಹ ತನ್ನ ಪತಿಯೊಂದಿಗೆ ವಾಸಿಸಬಹುದುʼ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ದಂಪತಿಗಳಾದ ಅಪ್ರಾಪ್ತ ಮುಸ್ಲಿಂ ಬಾಲಕಿ ಮತ್ತು ಆಕೆಯ ಪತಿ ರಕ್ಷಣೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʻದಂಪತಿಗಳು ರಕ್ಷಣೆ ಬಯಸಿದ್ದಾರೆ. ಅವರನ್ನು ಯಾರೂ ಬಲವಂತವಾಗಿ ಬೇರ್ಪಡಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ.
ಮಾರ್ಚ್ 11 ರಂದು ದಂಪತಿಗಳು ವಿವಾಹವಾಗಿದ್ದಾರೆ. ಇದು ಬಾಲಕಿಯ ಪೋಷಕರ ಇಚ್ಛೆಗೆ ವಿರುದ್ಧವಾಗಿತ್ತು. ಈ ಬಗ್ಗೆ ದೂರು ನೀಡಿದ್ದು, ಮದುವೆಯ ಸಮಯದಲ್ಲಿ, ಯುವಕನಿಗೆ 25 ವರ್ಷ ವಯಸ್ಸಾಗಿತ್ತು ಮತ್ತು ಬಾಲಕಿಗೆ ಇನ್ನೂ 15 ವರ್ಷ ಎಂದು ಪೋಷಕರು ಹೇಳಿಕೊಂಡಿದ್ದಾರೆ. ಆದ್ರೆ, ಪೋಷಕರು ನೀಡಿದ ಆಧಾರ್ ಕಾರ್ಡ್ ಪ್ರಕಾರ ಬಾಲಕಿಯ ವಯಸ್ಸು 19 ವರ್ಷಕ್ಕಿಂತ ಮೇಲ್ಪಟ್ಟಿದೆ ಎನ್ನಲಾಗಿದೆ.
ಆಗಸ್ಟ್ 17ರ ಆದೇಶದಲ್ಲಿ, ನ್ಯಾಯಮೂರ್ತಿ ಸಿಂಗ್ ಅವರು, ʻಮುಸ್ಲಿಂ ಕಾನೂನಿನ ಪ್ರಕಾರ, ಪ್ರೌಢಾವಸ್ಥೆಗೆ ಬಂದ ಹುಡುಗಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು ಮತ್ತು ಅವಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ಸಹ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕನ್ನು ಹೊಂದಿದ್ದಾಳೆʼ ಎಂದು ಎಂದಿದ್ದಾರೆ. ಸೋಮವಾರ ಸಂಜೆ ಆದೇಶದ ಪೂರ್ಣ ಪ್ರತಿ ಬಿಡುಗಡೆಯಾಗಿದೆ.
ಬಾಲಕಿ ಗರ್ಭಿಣಿಯಾಗಿದ್ದಾಗ ಆಕೆಯನ್ನು ಪತಿಯಿಂದ ಬೇರ್ಪಡಿಸಿದರೆ, ಆಕೆಗೆ ಹುಟ್ಟುವ ಮಗು ಹಾಗೂ ಆಕೆಯಗೆ ಹೆಚ್ಚು ಆಘಾತವನ್ನು ಉಂಟುಮಾಡುತ್ತದೆ. ಹೀಗಾಗಿ, ಇಲ್ಲಿ ರಾಜ್ಯದ ಉದ್ದೇಶವು ಅರ್ಜಿದಾರರ ಹಿತವನ್ನು ಕಾಪಾಡುವುದು ಸರ್ಕಾರದ ಗುರಿಯಾಗಬೇಕು. ಬಾಲಕಿ ಒಪ್ಪಿಗೆಯಿಂದ ಮದುವೆ ಆಗಿದ್ದರೆ ಹಾಗೂ ಸಂತೋಷವಾಗಿದ್ದರೆ, ಅವರ ವೈಯಕ್ತಿಕ ಬದುಕಿನಲ್ಲಿ ಪ್ರವೇಶಿಸಲು ಹಾಗೂ ಅವರನ್ನು ಬೇರ್ಪಡಿಸಲು ಯಾರಿಗೂ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
PublicNext
24/08/2022 02:16 pm