ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಇಂದು ಕೆಸಿಇಟಿ 2022ರ ರ್‍ಯಾಂಕ್‌ಗಳು ಮತ್ತು ಪುನರಾವರ್ತಿತ ವಿಷಯಗಳ ಕುರಿತು ಮೂರನೇ ವಿಚಾರಣೆಯನ್ನು ಪ್ರಾರಂಭಿಸಿದೆ. ಗೌರವಾನ್ವಿತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಮನವಿಯನ್ನು ಆಲಿಸಿದರು.
ಸೆಪ್ಟೆಂಬರ್ 19ರಂದು ನಡೆದ ಹಿಂದಿನ ವಿಚಾರಣೆಯಲ್ಲಿ, ಪೀಠವು ಕೆಸಿಇಟಿ 2022 ಪುನರಾವರ್ತಿತ ಮತ್ತು ಹೊಸ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇಂದು ಕೋರ್ಟ್‌ನಲ್ಲಿ ಏನಾಯಿತು?
ರಾಜ್ಯ ಸರ್ಕಾರದ ಪರ ವಕೀಲರು ಸರ್ಕಾರದ ಪ್ರಸ್ತಾವನೆಯನ್ನು ವಿವರಿಸಿದ್ದಾರೆ. ಪ್ರಸ್ತಾವನೆಗೆ ನ್ಯಾಯಪೀಠವು ಉತ್ತಮ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ. ಈ ಮೂಲಕ KCET 2022ರ ರ್‍ಯಾಂಕ್‌ಗಳ ಅಂತಿಮ ತೀರ್ಪನ್ನು ಸೆಪ್ಟೆಂಬರ್ 23ರಂದು ಬೆಳಿಗ್ಗೆ 10:30ಕ್ಕೆ ಪ್ರಕಟಿಸಲಿದೆ.
ಸರ್ಕಾರದ ಪ್ರಸ್ತಾವನೆಯಲ್ಲಿ ಏನಿದೆ?:
ಈ ವರ್ಷ 1,44,491 ಹೊಸ ವಿದ್ಯಾರ್ಥಿಗಳು KCET 2022ಗೆ ಹಾಜರಾಗಿದ್ದರು ಮತ್ತು 24,085 ಪುನರಾವರ್ತಿತ ವಿದ್ಯಾರ್ಥಿಗಳು ಹಾಜರಾಗಿದ್ದರು.
ಈ ಪೈಕಿ (2021ರ ಕೋವಿಡ್ ಬ್ಯಾಚ್) ಪುನರಾವರ್ತಿತ ವಿದ್ಯಾರ್ಥಿಗಳ ಮುಖ್ಯ ಪರೀಕ್ಷೆಯ ಪ್ರತಿ ವಿಷಯದಲ್ಲಿ 100ಕ್ಕೆ ಭೌತಶಾಸ್ತ್ರದಿಂದ 6.2716122 ಅಂಕಗಳು, ರಸಾಯನಶಾಸ್ತ್ರದಿಂದ 5.040258 ಅಂಕಗಳು ಮತ್ತು ಗಣಿತದಲ್ಲಿ 7.0760221 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ನಂತರ 50:50 ಆಧಾರದ ಮೇಲೆ ಲೆಕ್ಕ ಹಾಕಿ ರ್‍ಯಾಂಕ್ ಬಿಡುಗಡೆ ಮಾಡಲಾಗುವುದು.
ಮತ್ತೊಂದು ಮಹತ್ವದ ವಿಚಾರವೆಂದರೆ ಪುನರಾವರ್ತಿತ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ವಿವಿಧ ಐಟಿ-ಸಂಬಂಧಿತ ಕೋರ್ಸ್‌ಗಳಲ್ಲಿ ಸೀಟ್‌ಗಳನ್ನು ಶೇ. 10ರಷ್ಟು ಹೆಚ್ಚಿಸಲಾಗುವುದು ಎಂದು ರಾಜ್ಯ ಸರ್ಕಾರವು ಕೋರ್ಟ್‌ಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಮಾಹಿತಿ ನೀಡಿದೆ.
PublicNext
22/09/2022 09:24 pm