ಬೆಂಗಳೂರು : ಪಟಾಕಿ ಬ್ಯಾನ್ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನವೆಂಬರ್ 14ರಂದು ಹಾಕಿದ್ದ ಈ ಪೋಸ್ಟ್ ನಲ್ಲಿ ಅವರು, 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಮೊದಲಿನಿಂದಲೂ ಬಂದದ್ದೇನಲ್ಲ.
ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಪಟಾಕಿಯ ಕುರಿತಂತೆ ಯಾವುದೇ ಉಲ್ಲೇಖವಿಲ್ಲ.
ಪಟಾಕಿ ಭಾರತಕ್ಕೆ ಕಾಲಿಟ್ಟಿದ್ದು ಯುರೋಪಿಯನ್ನರ ಜತೆ' ಎಂದು ಬರೆದುಕೊಂಡಿದ್ದರು.
ಈ ಪೋಸ್ಟ್ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿವೆ.
ಪುರಾಣಗಳಲ್ಲಿಯೂ ಪಟಾಕಿಯ ಪ್ರಸ್ತಾಪವಿದೆ ಎಂದು ಸಾಬೀತು ಮಾಡುವುದಾಗಿ ಕೆಲವರು ಹೇಳಿಕೊಂಡಿದ್ದು, ಇದರ ಬಗ್ಗೆ ದೀಪಾವಳಿ ಮುಗಿದರೂ ಚರ್ಚೆ ನಿಂತಿಲ್ಲ.
ಇದೀಗ ನಟಿ ಕಂಗನಾ ರನೌತ್ ಬುಧವಾರ ರೂಪಾ ಅವರ ಹೇಳಿಕೆಗಳನ್ನು ಟೀಕಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಅಷ್ಟಕ್ಕೂ ಕಂಗನಾ ಎಂಟ್ರಿ ಕೊಡಲು ಕಾರಣ.
'ಅರ್ಧಂಬರ್ಧ ಜ್ಞಾನದೊಂದಿಗೆ ಜನರ ಹಾದಿ ತಪ್ಪಿಸುವಿರಿ. ನೀವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಹಾಗೂ ಆದೇಶದ ಬಗ್ಗೆ ಗೌರವವನ್ನೂ ತೋರುತ್ತಿಲ್ಲ, ನಿಮ್ಮಂಥ ಟ್ರೋಲರ್ ಗಳೊಂದಿಗೆ ಚರ್ಚೆ ಮುಂದುವರಿಸುವುದು ಅನವಶ್ಯಕ' ಎಂದು ರೂಪಾ ಟ್ವೀಟಿಸಿದ್ದು, ಕೆಲವು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುತ್ತೇನೆ ಎಂದಿದ್ದರು.
ಹಾಗಾಗಿ ಕಂಗನಾ ಎಂಟ್ರಿ ಕೊಟ್ಟಿದ್ದಾರೆ.
ಈ ಮಾತಿಗೆ ಸಮ್ಮತಿ ಸೂಚಿಸಿರುವ ನಟಿ ಕಂಗನಾ' ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ.
ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್ ಮಾಡಿದ್ದಾರೆ, ನಿಮಗೆ ನಾಚಿಗೆಯಾಗಬೇಕು' ಎಂದಿದ್ದಾರೆ.
ಅಷ್ಟು ಸಾಲದು ಎಂಬಂತೆ, 'ಮೀಸಲಾತಿಯ ಅಡ್ಡ ಪರಿಣಾಮಕ್ಕೆ ಉದಾಹರಣೆ ಇದು.
ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಶಮನಗೊಳಿಸುವ ಕಾರ್ಯಕ್ಕಿಂತ ಘಾಸಿ ಮಾಡುತ್ತಾರೆ.
ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೊಂದೂ ತಿಳಿದಿಲ್ಲ, ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದು ಖಂಡಿತ' ಎಂದಿದ್ದಾರೆ.
ಸದ್ಯ ವಾದ, ಪ್ರತಿವಾದ ಮುಂದುವರೆದಿದೆ.
PublicNext
18/11/2020 03:26 pm