ನವದೆಹಲಿ : 27 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ನಾಳೆ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.
ಇಡೀ ದೇಶವೇ ಕುತೂಹಲದಿಂದ ಈ ತೀರ್ಪಿಗಾಗಿ ಕಾಯುತ್ತಿದೆ.
ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಪ್ರಕರಣದ ಎಲ್ಲಾ 32 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐ ವಿಶೇಷ ನ್ಯಾಯಮೂರ್ತಿ ಎಸ್.ಕೆ. ಯಾದವ್ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ.
ಮುನ್ನಚ್ಚರಿಕ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ದೇಶದ್ಯಾಂತ ಸೂಕ್ಮ ಹಾಗೂ ಅತೀ ಸೂಕ್ಮ ಪ್ರದೇಶ ಸೇರಿದಂತೆ ಎಲ್ಲೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ಪ್ರಕರಣದ ಕುರಿತಂತೆ ಸಿಬಿಐ ಈವರೆಗೆ ಸುಮಾರು 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಜನರು ಆರೋಪಿಗಳಿದ್ದರು. ಆದರೆ ಅದರಲ್ಲಿ 17 ಜನ ಈಗಾಗಲೇ ಮೃತಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್,ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಕ್ಷಿ ಮಹಾರಾಜ್ ಸೇರಿದಂತೆ 32 ಜನ ಆರೋಪಿಗಳಾಗಿದ್ದಾರೆ.
ಸೆ.01ರಂದೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದೆ.
ಹೀಗಾಗಿ ವಿಶೇಷ ನ್ಯಾಯಾಧೀಶರು ಇದರ ತೀರ್ಪು ಬರೆಯಲು ಪ್ರಾರಂಭಿಸಿದ್ದಾರೆನ್ನಲಾಗಿದೆ.
ಏನಿದು ಪ್ರಕರಣ?
1992ರ ಡಿಸೆಂಬರ್ 6. ಅಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು.
ದೇಶಾದ್ಯಂತ ಕೋಮು ಸಂಘರ್ಷ ಭುಗಿಲೆದ್ದಿತ್ತು. ಮುಂಬಯಿ ಬಾಂಬ್ ಸ್ಫೋಟ, ಗೋಧ್ರಾ ದಹನ, ಗುಜರಾತ್ ಗಲಭೆಗಳು ಕೂಡ ನಡೆದದ್ದು ಇದೇ ಸಂದರ್ಭದಲ್ಲಿ.
ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು.
ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ಷೀಟ್ ನಲ್ಲಿ ಹೇಳಿದೆ.
ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನಕ್ಕೆ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಅವರ ಮೇಲೆ ಆರೋಪ ಹೊರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 92 ವರ್ಷದ ಎಲ್.ಕೆ.ಅಡ್ವಾಣಿಯವರು ಜುಲೈ 24ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು.
ಇನ್ನು, ಮುರುಳಿ ಮನೋಹರ್ ಜೋಷಿ ಜುಲೈ 23ರಂದು ತಮ್ಮ ಹೇಳಿಕೆ ದಾಖಲಿಸಿದ್ದು, ಇಬ್ಬರೂ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ನಿರಾಕರಿಸಿದ್ದಾರೆ.
PublicNext
29/09/2020 05:24 pm