ಲಕ್ನೋ: ಬಿಜೆಪಿ ಮುಖಂಡ, ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಯೂಟರ್ನ್ ಹೊಡೆದಿದ್ದಾಳೆ. 'ನನ್ನ ಮೇಲೆ ಅತ್ಯಾಚಾರವೇ ನಡೆದಿಲ್ಲ' ಎಂಬ ವಿದ್ಯಾರ್ಥಿನಿಯ ಹೇಳಿಕೆ ಕೇಳಿದ ವಕೀಲರಿಗೆ ಅಚ್ಚರಿಯಾಗಿದೆ.
ವಿದ್ಯಾರ್ಥಿನಿಯ ದಿಢೀರ್ ಹೇಳಿಕೆಯಿಂದ ವಿಚಲಿತರಾದ ಸರ್ಕಾರಿ ವಕೀಲರು ಐಪಿಸಿಯ ಸೆಕ್ಷನ್ 340ರ ಅನ್ವಯ ಸುಳ್ಳು ಸಾಕ್ಷಿಗಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಡಲೇ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಧೀಶ ಪಿ.ಕೆ.ರಾಯ್ ತಮ್ಮ ಅಧಿಕಾರಿಗಳಿಗೆ ಸೂಚಿಸಿ, ಪ್ರತಿಯನ್ನು ವಿದ್ಯಾರ್ಥಿನಿಗೆ ನೀಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 15ರಂದು ನಡೆಯಲಿದೆ.
ಏನಿದು ಪ್ರಕರಣ: ಸ್ನಾತಕೋತ್ತರ ಕಾನೂನು ಪದವೀಧರೆಯಾಗಿರುವ ವಿದ್ಯಾರ್ಥಿನಿ ನನ್ನ ಮೇಲೆ ಚಿನ್ಮಯಾನಂದ ಅತ್ಯಾಚಾರ ಎಸಗಿದ್ದಾರೆ ಎಂದು ಕಳೆದ ವರ್ಷ ಪೊಲೀಸರಿಗೆ ದೂರು ನೀಡಿದ್ದಳು. ಅದಾದ ಕೆಲ ದಿನಗಳ ಬಳಿಕ ಪ್ರಕರಣ ವಾಪಸ್ ಪಡೆಯಬೇಕೆಂದರೆ ಐದು ಕೋಟಿ ರೂಪಾಯಿ ನೀಡಿ ಎಂದು ಬೇಡಿಕೆ ಒಡ್ಡಿದ್ದಳು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ ಅಧಿಕಾರಿಗಳು ಸುಲಿಗೆ ಪ್ರಕರಣದಲ್ಲಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು.
PublicNext
14/10/2020 12:16 pm