ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
1 ಹದ ಗಾತ್ರದ ಸೋರೆಕಾಯಿ, ಎಣ್ಣೆ-2 ಟೇಬಲ್ ಸ್ಪೂನ್, ಈರುಳ್ಳಿ-1 ಮಧ್ಯಮ ಗಾತ್ರದ್ದು, ಶುಂಠಿ ತುರಿ-1/2 ಟೀ ಸ್ಪೂನ್, ಬೆಳ್ಳುಳ್ಳಿ-1/2 ಟೀ ಸ್ಪೂನ್ ಜಜ್ಜಿದ್ದು, ಟೊಮೆಟೊ-2 ಸಣ್ಣಗೆ ಹಚ್ಚಿದ್ದು, ಹಸಿಮೆಣಸು-2 ಹಚ್ಚಿಟ್ಟುಕೊಂಡಿದ್ದು, ಸಾಸಿವೆ-1/2 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಅರಿಶಿನ-ಚಿಟಿಕೆ, ಖಾರದಪುಡಿ-1/2 ಟೀ ಸ್ಪೂನ್, ಕೊತ್ತಂಬರಿ ಪುಡಿ-2 ಟೀ ಸ್ಪೂನ್, ಗರಂ ಮಸಾಲ-1/4 ಟೀ ಸ್ಪೂನ್, ಜೀರಿಗೆ ಪುಡಿ-1/4 ಟೀ ಸ್ಪೂನ್, ನೀರು-1/2 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ತಗೆಯಿರಿ. ನಂತರ ಅದರ ಬೀಜ ತೆಗೆದು ಸೋರೆಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ.
ಒಂದು ಕುಕ್ಕರ್ ಗೆ ಅರ್ಧ ಕಪ್ ನೀರು, ಸೋರೆಕಾಯಿ, ಅರಿಸಿನ, ಉಪ್ಪು ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿಕೊಳ್ಳಿ. ಅದು ಬಿಸಿಯಾಗುತ್ತಲೆ ಸಾಸಿವೆ, ಕತ್ತರಿಸಿಟ್ಟುಕೊಂಡ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ 2 ನಿಮಿಷಗಳ ಕಾಲ ಕೈಯಾಡಿಸಿ.
ನಂತರ ಟೊಮೆಟೊ ಹಸಿಮೆಣಸು ಸೇರಿಸಿ. ಖಾರದಪುಡಿ, ಗರಂ ಮಸಾಲ ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೇಯಿಸಿಟ್ಟುಕೊಂಡ ಸೋರೆಕಾಯಿ ಸೇರಿಸಿ 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
PublicNext
11/10/2021 12:00 pm