ವೆಜ್ ಕಟ್ಲೆಟ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ತರಕಾರಿ ಹಾಕಿ ಮಾಡುವುದರಿಂದ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿ: ಕತ್ತರಿಸಿದ ಕ್ಯಾರೆಟ್ –ಅರ್ಧ ಕಪ್. ಬೀನ್ಸ್-ಅರ್ಧ ಕಪ್, ಬಟಾಣಿ-ಕಾಲು ಕಪ್, ಆಲೂಗಡ್ಡೆ-1ಕಪ್, ಕೊತ್ತಂಬರಿ ಸೊಪ್ಪು-1/4 ಕಪ್, ಹಸಿಮೆಣಸು-2, ¼ ಕಪ್ ಈರುಳ್ಳಿ, ½ ಟೀ ಸ್ಪೂನ್-ಕೊತ್ತಂಬರಿ ಪೌಡರ್. 1 ಟೀ ಸ್ಫೂನ್-ಶುಂಠಿ ಪೇಸ್ಟ್. 3 ದೊಡ್ಡ ಚಮಚದಷ್ಟು ಮೈದಾ, ½ ಟೀ ಸ್ಪೂನ್-ಗರಂ ಮಸಾಲಾ, ಉಪ್ಪು ರುಚಿಗೆ ತಕ್ಕಷ್ಟು, ½ ಟೀ ಸ್ಪೂನ್-ಅಚ್ಚ ಖಾರದಪುಡಿ, 1 ಟೀ ಸ್ಪೂನ್ –ಸಾಸಿವೆ. ¾ ಕಪ್ ಬ್ರೆಡ್ ಕ್ರಂಬ್, ಸ್ವಲ್ಪ ನೀರು. ಎಣ್ಣೆ-2 ಟೇಬಲ್ ಸ್ಪೂನ್ ನಷ್ಟು.
ಮಾಡುವ ವಿಧಾನ: ಮೊದಲಿಗೆ ತರಕಾರಿಗಳನ್ನೆಲ್ಲಾ ಕುಕ್ಕರ್ ನಲ್ಲಿಟ್ಟು ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಈರುಳ್ಳಿ ಬೇಯುವವರೆಗೆ ಸ್ವಲ್ಪ ತಿರುವಿಕೊಳ್ಳಿ. ನಂತರ ಇದಕ್ಕೆ ಬ್ರೆಡ್ ಕ್ರಂಬ್ಸ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ಖಾರದಪುಡಿ, ಕೊತ್ತಂಬರಿಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತರಕಾರಿಗಳು ಮೆತ್ತಗಾಗಬೇಕು. ಇದು ಹಿಟ್ಟಿನ ಹದಕ್ಕೆ ತಂದು ನಿಮಗೆ ಬೇಕಾದ ಶೇಪ್ ಮಾಡಿ. ನಂತರ ಮೈದಾ ಹಿಟ್ಟಿಗೆ ತುಸು ನೀರು ಸೇರಿಸಿ ದೋಸೆ ಹಿಟ್ಟಿನ ಹಾಗೇ ಮಾಡಿಕೊಳ್ಳಿ. ಇನ್ನೊಂದು ತಟ್ಟೆಯಲ್ಲಿ ಬ್ರೆಡ್ ಕ್ರಂಬ್ಸ್ ಇಟ್ಟುಕೊಳ್ಳಿ. ಶೇಪ್ ಮಾಡಿಕೊಂಡ ಕಟ್ಲೆಟ್ ಅನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಕ್ರಂಬ್ಸ್ ಇರುವ ತಟ್ಟೆಗೆ ಅದ್ದಿ. ಎಣ್ಣೆ ಹಾಕಿದ ತವಾದಲ್ಲಿ ಶಾಲೋ ಫ್ರೈ ಮಾಡಿಕೊಳ್ಳಿ.
PublicNext
01/09/2021 06:57 pm