ಉಪ್ಪು ಹುಳಿ ಖಾರ ಇದ್ದರೆ ನಾಲಿಗೆಗೆ ಇನ್ನಷ್ಟು ಮುದ ಸಿಗುತ್ತದೆ. ಹಾಗಾದರೆ ಫ್ರೂಟ್ ಚಾಟ್ ರೆಸಿಪಿ ಮಾಡಿ ಬಾಯಿ ಚಪ್ಪರಿಸಿ ತಿನ್ನಿ.
ಬಣ್ಣ ಬಣ್ಣದ ಹಣ್ಣುಗಳ ಹೋಳನ್ನು ಸವಿದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಿತ್ಯ ಅದೇ ಹಣ್ಣುಗಳನ್ನು ತಿನ್ನಲು ಕಷ್ಟ ಎನಿಸಬಹುದು.
ಬೇಕಾಗುವ ಸಾಮಾಗ್ರಿಗಳು
ಬಾಳೆಹಣ್ಣು – 2
ಸೇಬು-1
ಸೀಬೆ ಕಾಯಿ -1
ದಾಳಿಂಬೆ – 1/2
ಕಿವಿ ಹಣ್ಣು-1
ಮರಸೇಬು – 1
ನಿಂಬೆ ರಸ – 4 ಟೀ ಚಮಚ
ಕಲ್ಲುಪ್ಪು – ರುಚಿಗೆ
ಚಾಟ್ ಮಸಾಲ – 1/2 ಟೀ ಚಮಚ
ಮಾಡುವ ವಿಧಾನ
ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್ ನಲ್ಲಿ ಇರಿಸಿ. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
ಮರಸೇಬು ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ. ಈ ಎಲ್ಲಾ ಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ ನಿಂಬೆ ರಸವನ್ನು ಸೇರಿಸಿ. ನಂತರ ಕಲ್ಲುಪ್ಪನ್ನು ಹಾಕಿ. ಚಾಟ್ ಮಸಾಲವನ್ನು ಸೇರಿಸಿ. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.
PublicNext
22/02/2021 04:14 pm