ಆಲೂಗಡ್ಡೆ ಮತ್ತು ಬೆಂಡೆಕಾಯಿ ಫ್ರೈ ಮಾಡಿ ಒಮ್ಮೆ ರುಚಿ ಸವಿದು ನೋಡಿ. ಮಸ್ತ್ ಆಗಿರುತ್ತದೆ. ಆದರೆ ಮಾಡುವ ರೀತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ರುಚಿಯೂ ಕೆಡುತ್ತದೆ. ಸರಳವಾಗಿ ಹುರಿದ ಬೆಂಡೆ-ಆಲೂ ಹೇಗೆ ಮಾಡುವುದೆಂದು ನೋಡೋಣ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ – 2 ದೊಡ್ಡ ಚಮಚ
ಬೆಂಡೆ – 10, ಹೆಚ್ಚಿದ್ದು
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1 ಚಮಚ
ಜೀರಿಗೆ – ಅರ್ಧ ಚಮಚ
ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
ಟೊಮೇಟೊ – 1, ಹೆಚ್ಚಿದ್ದು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಆಲೂಗಡ್ಡೆ – 2, ಹೆಚ್ಚಿದ್ದು
ಉಪ್ಪು – ಒಂದು ಚಿಟಿಕೆ
ಅರಶಿನ ಪುಡಿ – ಕಾಲು ಚಮಚ
ಅಚ್ಛ ಖಾರದ ಪುಡಿ – 1 ಚಮಚ
ಗರಂ ಮಸಾಲಾ ಪುಡಿ – ಕಾಲು ಚಮಚ
ಕಸೂರಿ ಮೇಥಿ – 1 ಚಮಚ
ಆಮ್ ಚೂರ್ ಪುಡಿ – ಕಾಲು ಚಮಚ
ಮಾಡುವ ವಿಧಾನ:
ಬೆಂಡೆಯನ್ನು ಎಣ್ಣೆಯಲ್ಲಿ 5 ನಿಮಿಷಗಳ ಕಾಲ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ.ಸಾಸಿವೆ ಸಿಡಿದ ಮೇಲೆ ಜೀರಿಗೆ ಹಾಕಿ ಹುರಿಯಿರಿ.ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ ಹುರಿಯಿರಿ.ನಂತರ ಸಣ್ಣಗೆ ಹೆಚ್ಚಿದ ಟೊಮ್ಯಾಟೋಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ.ಒಮ್ಮೆ ಕಲಸಿ ನಂತರ ಮುಚ್ಚಳ ಮುಚ್ಚಿ ಟೊಮೇಟೊ ಸರಿಯಾಗಿ ಮೆತ್ತಗಾಗುವ ತನಕ ಬೇಯಿಸಿಕೊಳ್ಳಿ.
ಹೆಚ್ಚಿದ ಆಲೂಗಡ್ಡೆಗಳನ್ನು ಹಾಕಿ ಹಾಗೂ ಚಿಟಿಕೆ ಉಪ್ಪನ್ನು ಹಾಕಿಕೊಳ್ಳಿ. ಒಂದು ನಿಮಿಷ ಆಲೂಗಡ್ಡೆಯನ್ನು ಚೆನ್ನಾಗಿ ಹುರಿಯಿರಿ ಹಾಗೂ ಅವನ್ನು 5 ರಿಂದ 7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ಮಧ್ಯ ಮಧ್ಯದಲ್ಲಿ ಕಲಕುತ್ತ ಇರಿ. ಮೇಲೆ ಬರೆದ ಎಲ್ಲ ಮಸಾಲೆ ಪುಡಿಗಳನ್ನು ಒಂದಾದ ಮೇಲೊಂದರಂತೆ ಹಾಕಿ ಕಲಸಿ. ಹುರಿದು ಬೇಯಿಸಿಟ್ಟ ಬೆಂಡೆ ಹೋಳುಗಳನ್ನು ಹಾಕಿ ಕಲಸಿ. ಸಣ್ಣ ಉರಿಯಲ್ಲಿ ಇನ್ನೂ ಎರಡು ನಿಮಿಷಗಳ ಕಾಲ ಹುರಿಯುತ್ತ ಬೇಯಿಸಿ. ಅಷ್ಟೇ ! ಅನ್ನದ ಜೊತೆ ಸೈಡ್ ಡಿಶ್ ಆಗಿ ಅಥವಾ ಚಪಾತಿ ಜೊತೆಗೆ ಬಡಿಸಿ.ಬಡಿಸುವ ಮುಂಚೆಯೇ ತಿಂದು ಖಾಲಿ ಆಗದೆ ಇರುವ ಹಾಗೆ ನೋಡಿಕೊಳ್ಳಿ.ಏಕೆಂದರೆ ಈ ಪಲ್ಯ ಅಷ್ಟು ರುಚಿ.
PublicNext
13/01/2021 07:44 pm