ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ಯಲ್ಲಿ ಮತ್ತೆ ಅಕ್ರಮ ಶಂಕೆ ವ್ಯಕ್ತವಾಗಿದೆ.
ಹೌದು. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸುದ್ದಿಯಲ್ಲಿದ್ದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆಗಳ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಕೆಪಿಎಸ್ಸಿ ಬಿಡುಗಡೆ ಮಾಡಿದೆ. ಒಂದೇ ಸಮುದಾಯದ 70 ಮಂದಿಗೆ ಅರ್ಹತೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
1112 ಹುದ್ದೆಗಳಿಗೆ ನಡೆಸಿದ ಆಯ್ಕೆ ಪರೀಕ್ಷೆ ಇದಾಗಿದ್ದು, ಅರ್ಹತಾ ಪಟ್ಟಿಯಲ್ಲಿ 3,852 ಅಭ್ಯರ್ಥಿಗಳ ಹೆಸರಿದೆ. ಕೆಪಿಎಸ್ಸಿ ಬಿಡುಗಡೆ ಮಾಡಿದ ಎಫ್ಡಿಎ ಅರ್ಹತಾ ಪಟ್ಟಿಯಲ್ಲಿ 5241, 42, 43 ನೋಂದಣಿ ಸಂಖ್ಯೆಯಲ್ಲಿರುವ ಒಂದೇ ಸಮುದಾಯದ (ನಾಯ್ಕ್) ಸುಮಾರು 70ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, ಬಹುತೇಕರು ಒಂದೇ ಕೊಠಡಿಯಲ್ಲಿ ಬರೆದಿದ್ದಾರೆಂಬ ಅನುಮಾನಗಳನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ.
ಈ ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಪಿಎಸ್ಸಿ ಬಗ್ಗೆ ಹಲವು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಟ್ಟದಾಗಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಈ ರೀತಿ ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡುವುದಾದರೆ, ಪರೀಕ್ಷೆ ಏಕೆ ನಡೆಸಬೇಕಾಗಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಎಸ್ಸಿ, "ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿರುತ್ತದೆ. ಇಲ್ಲಿ ಆಯೋಗದ ಹಸ್ತಕ್ಷೇಪ ಇರುವುದಿಲ್ಲ. ಅಲ್ಲದೆ ಅಲ್ಲಿ ಅಭ್ಯರ್ಥಿಗಳ ಸಮುದಾಯ ಕೂಡ ನಮೂದಾಗಿರುವುದಿಲ್ಲ. ಆದರೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
PublicNext
12/09/2021 12:27 pm