ಬೆಂಗಳೂರು: ಸಾಮಾಜಿಕ ಜಾಲತಾಣಗಳು ನಮ್ಮ ವಿಚಾರ, ಅಭಿಪ್ರಾಯ, ಮಾಹಿತಿ ಹಂಚಿಕೊಳ್ಳಲು ಅಷ್ಟೇ ಅಲ್ಲದೆ ಇತರರ ಸಹಾಯಕ್ಕೆ ನಿಲ್ಲಲು ಉತ್ತಮ ವೇದಿಕೆ ಎನ್ನುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿಕೊಟ್ಟಿದ್ದಾರೆ.
ಡೆಡ್ಲಿ ಕೊರೊನಾದಿಂದಾಗಿ ಅನೇಕ ಯುವಕ-ಯುವತಿಯರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೌರಜ್ ಮಂಗಳೂರು ಎಂಬವರು ‘ಫೇಸ್‌ಬುಕ್ ಲೈವ್’ನಿಂದ 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸಿದ್ದಾರೆ.
ಹಲವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸೌರಜ್ ಮಂಗಳೂರು, ಮೂರು ದಿನಗಳ ಹಿಂದೆ ತಮ್ಮ ಫೇಸ್‌ಬುಕ್ ಪುಟದ ಮೂಲಕ ಐದು ನಿಮಿಷಗಳ ಲೈವ್ ನೀಡಿದ್ದರು. ಆ ಮೂಲಕ ಯಾವ ರೀತಿ ಜಿಲ್ಲೆಯಲ್ಲಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ವಿವರಿಸಿದ್ದರು.
ಅನೇಕರು ಸೌರಜ್ ಅವರಿಗೆ ಕರೆ ಮಾಡಿ ಡ್ರೈವರ್, ಹೆಲ್ಪರ್ ಅಥವಾ ಯಾವುದಾದರು ಕೆಲಸ ಇದೆಯೇ ಎಂದು ಕೇಳಿದ್ದರಂತೆ. ಹೀಗಾಗಿ ಅವರಿಗೆ ಫೇಸ್‌ಬುಕ್ ಲೈವ್ ವಿಚಾರ ಹೊಳೆದಿತ್ತು. ಕನಿಷ್ಠ 10 ಮಂದಿಗಾದರೂ ಕೆಲಸ ಸಿಕ್ಕಿದರೆ ಸಾಕು ಎಂಬ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿ ಲೈವ್ ಬಂದು ಐದು ನಿಮಿಷಗಳ ಕಾಲ, ಲೈವ್ ನೋಡಿದವರು ಕಮೆಂಟ್ ಮಾಡಿ ತಮಗೆ ಬೇಕಾದ ಕೆಲಸದ ವಿಚಾರ, ಫೋನ್ ನಂಬರ್ ಹಾಕುವಂತೆ ಸೌರಜ್ ಹೇಳಿದ್ದರು. ಅನೇಕ ಮಂದಿ ಬೇಕಾದ ಕೆಲಸದ ಬಗ್ಗೆ ಹಾಕಿಕೊಂಡರೆ ಉದ್ಯೋಗದಾತರು ತಮಗೆ ಕೆಲಸದವರು ಬೇಕು ಎಂದು ಹಾಕಿಕೊಂಡಿದ್ದರು.
ಸೌರಜ್ ಅವರ ಲೈವ್ ವಿಡಿಯೋ ವೈರಲ್ ಆಗಿ 91 ಸಾವಿರ ಮಂದಿ ವೀಕ್ಷಿಸಿದ್ದಾರೆ. 1200ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಕನಿಷ್ಠ 50 ಮಂದಿಗೆ ಕೆಲಸ ಸಿಕ್ಕಿದೆ.
PublicNext
22/09/2020 06:07 pm