ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಗೋಳ್ರೀ ರಾಜೀನಾಮೆ!; ಅಮೆರಿಕದಲ್ಲಿ ಗ್ರೇಟ್ ರಿಸೆಷನ್ ನಂತರ ಈಗ ಗ್ರೇಟ್ ರೆಸಿಗ್ನೇಶನ್ ಅಲೆ

ಕೊರೊನಾ ಮಹಾಮಾರಿ ಅನೇಕ ಸ್ಥಿತ್ಯಂತರಗಳನ್ನು ಸೃಷ್ಟಿಸಿತು. ಆರ್ಥಿಕತೆ ಕುಸಿದ ಪರಿಣಾಮ ಅಸಂಖ್ಯ ಜನರು ಕೆಲಸ ಕಳೆದುಕೊಂಡರು. ಆದರೆ, ಲಾಕ್​ಡೌನ್ ಅವಧಿಯಲ್ಲಿ ಕೊರೊನಾ ‘ಜೀವನದರ್ಶನ’ ಮಾಡಿಸಿದ್ದು, ತೀವ್ರ ಒತ್ತಡ ಎದುರಿಸಿ ಕೆಲಸ ಮಾಡುವ ಸಹವಾಸವೇ ಬೇಡಪ್ಪ ಅಂತ ಜನರು ಧೈರ್ಯದಿಂದಲೇ ಕೆಲಸಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಹೀಗೆ ಕೆಲಸ ತೊರೆದವರು ನವೋದ್ಯಮ, ಸಣ್ಣ ವ್ಯಾಪಾರ ಆರಂಭಿಸಿದ್ದರೆ ಕೆಲವರು ಆಸಕ್ತಿಯ ಕ್ಷೇತ್ರಗಳನ್ನೇ ವೃತ್ತಿಯಾಗಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ.

ಕಾಲಚಕ್ರ ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ನಿರುದ್ಯೋಗ ಸಮಸ್ಯೆ ಯಾವುದೇ ದೇಶಕ್ಕಾದರೂ ಪ್ರಮುಖ ಸವಾಲು. ಆದರೆ, ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯನ್ನು ಜಗತ್ತಿನ ಹಲವು ದೇಶಗಳು ಎದುರಿಸುತ್ತಿವೆ. ಹೌದು, ಮೊದಲೆಲ್ಲ ಸಂಬಳದ ಆಕರ್ಷಕ ಪ್ಯಾಕೇಜ್ ಇದ್ದರೆ ಸಾಕು; ಎಂಥ ಕಾರ್ಯದೊತ್ತಡವನ್ನೂ ಎದುರಿಸಿ ಕೆಲಸ ಮಾಡುತ್ತಿದ್ದ ‘ಶ್ರಮಜೀವಿ’ಗಳಿಗೆ ಈಗ ಜಾಬ್ ಬೋರ್ ಮಾತ್ರವಲ್ಲ ಅತಿಯಾದ ಸ್ಟ್ರೆಸ್ ಎನಿಸುತ್ತಿದೆ. ಮುಂಚೆಯೂ ಈ ಒತ್ತಡವಿತ್ತು. ಆದರೆ, ಕರೊನಾ ಕಾಲದಲ್ಲಿನ ಸಾವು-ನೋವುಗಳು, ಕಷ್ಟಗಳನ್ನು ಕಣ್ಣಾರೆ ನೋಡಿದ ಜನರು ‘ಇದ್ದಷ್ಟು ದಿನ ನೆಮ್ಮದಿಯಾಗಿ ಬದುಕಿಬಿಡಬೇಕು’ ಎಂಬ ತೀರ್ವನಕ್ಕೆ ಬರುತ್ತಿದ್ದಾರೆ. ಆದಾಯ ಕಡಿಮೆಯಾದರೂ ಪರವಾಗಿಲ್ಲ; ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು, ತಮ್ಮ ಆಸಕ್ತಿ, ಹವ್ಯಾಸಗಳಿಗೆ ಸಮಯ ಮೀಸಲಿಡಬೇಕು. ಮುಖ್ಯವಾಗಿ, ದಿನಚರಿಯನ್ನು ಆಫೀಸ್ ಕ್ಯಾಲೆಂಡರ್ ಪ್ರಕಾರ ಹೊಂದಾಣಿಕೆ ಮಾಡಿಕೊಳ್ಳುವ ಪ್ರವೃತ್ತಿಗೆ ಕೊನೆ ಹಾಡಿ, ಲೈಫ್ ಕ್ಯಾಲೆಂಡರ್​ಗೆ ಆದ್ಯತೆ ನೀಡಬೇಕು ಎಂಬ ಚಿಂತನೆ ಈಗ ಅನುಷ್ಠಾನದ ಅಲೆಯಾಗಿ ಪರಿವರ್ತಿತವಾಗಿದೆ. ಮುಖ್ಯವಾಗಿ, ಕೆಲಸ ಮತ್ತು ವೈಯಕ್ತಿಕ ಬದುಕು ಸಮತೋಲನ ಮಾಡಲು ಸಾಧ್ಯವಾಗದಿರುವುದು ಜನರನ್ನು ಖಿನ್ನತೆಯಂಥ ಸಮಸ್ಯೆಗೂ ನೂಕುತ್ತಿದೆ. ಅದರಲ್ಲೂ, ಕರೊನಾ ದಿನಗಳಲ್ಲಿ ಜನರು ‘ನಾವು ಯಾಕಾಗಿ ಇಷ್ಟು ದುಡಿಯುತ್ತಿದ್ದೇವೆ, ಯಾರಿಗಾಗಿ ದುಡಿಯುತ್ತಿದ್ದೇವೆ?’ ಎಂದು ಪ್ರಶ್ನಿಸಿಕೊಂಡು, ತಮಗಾಗಿ ಬದುಕಲು ಹಾತೊರೆಯುತ್ತಿದ್ದಾರೆ. ‘ಸ್ನೇಹಿತರನ್ನು, ಸಂಬಂಧಿಕರನ್ನು ಭೇಟಿಯಾಗದಷ್ಟು ‘ಬಿಜಿ’ಯಾಗಿದ್ದೇವೆ. ಇಷ್ಟದ ಪ್ರವಾಸಿತಾಣಕ್ಕೆ ಹೋಗಲು ಆಗುತ್ತಿಲ್ಲ, ಇಷ್ಟದ ಸಿನಿಮಾ ನೋಡಲು ಸಮಯ ಸಿಗುತ್ತಿಲ್ಲ. ಕೆಲಸ ಇದೆ, ಕೆಲಸ ಇದೆ… ಅಂತ ಸಂಬಂಧಿಕರ, ಸ್ನೇಹಿತರ ಮದುವೆ ಮತ್ತು ಇತರ ಪ್ರಮುಖ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಶಾಲೆಗಳಲ್ಲಿ ಪಾಲಕರ-ಶಿಕ್ಷಕರ ಸಭೆ ಬಿಟ್ಟು ಬರೀ ಆಫೀಸ್ ಮೀಟಿಂಗ್​ನಲ್ಲಿ ಪಾಲ್ಗೊಳ್ಳುತ್ತೇವೆ. ಇಂಥ ಬರ್ನೌಟ್ ಇನ್ನೆಷ್ಟು ದಿನ ಸಹಿಸಬೇಕು…?’ ಎಂಬ ಪ್ರಶ್ನೆ ಕೆಲಸ ತೊರೆದವರದ್ದು. ಹಾಗಾಗಿಯೇ ಹಿಂದೊಮ್ಮೆ ಗ್ರೇಟ್ ರಿಸೆಷನ್ ಕಂಡಿದ್ದ ಅಮೆರಿಕದಲ್ಲಿ ಈಗ ಗ್ರೇಟ್ ರೆಸಿಗ್ನೇಶನ್ ವೇವ್ ಸೃಷ್ಟಿಯಾಗಿದೆ. ಪರಿಣಾಮ, ಖ್ಯಾತನಾಮ ಕಂಪನಿಗಳಿಂದ ಹಿಡಿದು ಸಣ್ಣಪುಟ್ಟ ಉದ್ಯಮಗಳವರೆಗೂ ನುರಿತ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಅಮೆರಿಕದಲ್ಲಿ ಸರ್ಕಾರ ನೀಡುತ್ತಿರುವ ‘ನಿರುದ್ಯೋಗ ಭತ್ಯೆ’ಯೂ ಜನರು ಕೆಲಸದಿಂದ ದೂರ ಉಳಿಯಲು ಒಂದು ಪ್ರಮುಖ ಕಾರಣ. ಅದೇನಿದ್ದರೂ, ತಿಂಗಳಿಂದ ತಿಂಗಳಿಗೆ ಕೆಲಸ ಬಿಡುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ‘ರಾಜೀನಾಮೆ ಪರ್ವ’ ದೊಡ್ಡ ಉದ್ಯಮಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಸಣ್ಣ ವ್ಯಾಪಾರಿಗಳಂತೂ ಅಂಗಡಿ ಬಾಗಿಲು ಹಾಕುವ ಸ್ಥಿತಿಗೆ ಬಂದಿದ್ದಾರೆ. ಈ ಚಿತ್ರಣವನ್ನು ಅಮೆರಿಕದಲ್ಲಿ ಮಾತ್ರವಲ್ಲ ಭಾರತದ ಮಹಾನಗರಗಳಲ್ಲೂ ಕಾಣಬಹುದು. ಕರೊನಾ ಸಮಯದಲ್ಲಿ ಊರಿಗೆ ಮರಳಿದ ಸಣ್ಣ ಸಂಬಳದ ಉದ್ಯೋಗಿಗಳ ಪೈಕಿ ಹೆಚ್ಚಿನವರು ಮರಳಿ ಕೆಲಸಕ್ಕೆ ಬಂದಿಲ್ಲ. ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕಂತೂ ಭಾರಿ ಪೆಟ್ಟು ಬಿದ್ದಿದ್ದು, ದೊಡ್ಡ ಹೋಟೆಲ್​ಗಳು ಟೇಬಲ್ ಸರ್ವಿಸ್ ಬಂದ್ ಮಾಡಿ, ‘ದರ್ಶಿನಿ’ ಮಾದರಿಗೆ ಮಾರ್ಪಾಡಾಗುತ್ತಿವೆ.

ಏನಿದು ಗ್ರೇಟ್ ರೆಸಿಗ್ನೇಶನ್?: ‘ಗ್ರೇಟ್ ರೆಸಿಗ್ನೇಶನ್’ ಎಂಬ ಪದವನ್ನು 2019ರಲ್ಲಿ ಟೆಕ್ಸಾಸ್​ನ ಪ್ರೊಫೆಸರ್ ಅಂಥನಿ ಕ್ಲಾಟ್ಜ್ ಬಳಸಿದ್ದರು. ಮಾತ್ರವಲ್ಲ, ‘ಮುಂಬರುವ ದಿನಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ತೊರೆಯಲಿದ್ದಾರೆ’ ಎಂದಿದ್ದರು. ಎರಡು ವರ್ಷದೊಳಗೇ ಅವರು ಹೇಳಿದ ಮಾತು ನಿಜವಾಗುತ್ತಿದೆ.

ಕೆಲಸ ಬಿಟ್ಟವರು ಏನು ಮಾಡುತ್ತಿದ್ದಾರೆ?

* ಪೂರ್ಣಾವಧಿ ಉದ್ಯೋಗ ತೊರೆದವರು ಫ್ರೀಲಾನ್ಸಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ.

* ಯುವಕರು ನವೋದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಸ್ನೇಹಿತರ ಜತೆಗೂಡಿ ಸ್ಥಾಪಿಸುವ ನವೋದ್ಯಮಗಳ ಸಂಖ್ಯೆಯೂ ಹೆಚ್ಚುತ್ತಿದೆ.

* ಆಸಕ್ತಿ, ಹವ್ಯಾಸವನ್ನೇ ಅದೆಷ್ಟೋ ಜನರು ವೃತ್ತಿಯಾಗಿಸಿಕೊಂಡಿದ್ದಾರೆ. ಉದಾ- ಹಾಡುಗಾರಿಕೆ, ಡಾನ್ಸ್, ಟ್ಯೂಶನ್, ವಿವಿಧ ಕೌಶಲಗಳ ತರಬೇತಿ ನೀಡುವುದು.

* 22ರಿಂದ 28 ವರ್ಷದೊಳಗಿನವರ ಪೈಕಿ ಸಾಕಷ್ಟು ಜನರು ಉನ್ನತ ಶಿಕ್ಷಣದತ್ತ ಮುಖಮಾಡಿದ್ದಾರೆ.

* ತಾಜಾ ಚಿಂತನೆಗಳಿಗೆ ಅನುಷ್ಠಾನದ ರೂಪ ನೀಡಿ, ಅದನ್ನೇ ಆದಾಯದ ಮೂಲವಾಗಿಸಿಕೊಳ್ಳುತ್ತಿದ್ದಾರೆ.

* ಪೂರ್ಣಾವಧಿಯ ವ್ಯಾಪಾರದಲ್ಲೂ ತೊಡಗಿಕೊಂಡವರ ಸಂಖ್ಯೆ ಗಮನಾರ್ಹ.

ಗಾಬರಿಗೊಳಿಸುವ ಅಂಕಿ-ಸಂಖ್ಯೆಗಳು: ಅಮೆರಿಕವೊಂದರಲ್ಲೇ ಈ ವರ್ಷ (2021) 3.4 ಕೋಟಿ ಜನರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ! ಸೆಪ್ಟೆಂಬರ್ ತಿಂಗಳೊಂದರಲ್ಲೇ ಕೆಲಸ ತೊರೆದವರ ಸಂಖ್ಯೆ 44 ಲಕ್ಷಕ್ಕೂ ಅಧಿಕ. ಹೀಗೆ ರಾಜೀನಾಮೆ ನೀಡುತ್ತಿರುವವರ ಪೈಕಿ ಯುವಜನರೇ ಹೆಚ್ಚು. ಬ್ರಿಟನ್, ಜರ್ಮನಿ ಮತ್ತು ಭಾರತದ ಹಲವು ಕಂಪನಿಗಳು ನುರಿತ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಜರ್ಮನಿಯಲ್ಲಿ 4 ಲಕ್ಷ ವೇಕೆನ್ಸಿಗಳು ಇದ್ದರೂ, ಜನರು ಕೆಲಸಕ್ಕೆ ಬರುತ್ತಿಲ್ಲ. ಆಸ್ಟ್ರೇಲಿಯಾದಲ್ಲೂ ಸಂಬಳಕ್ಕಿಂತ ಸ್ವಾಭಿಮಾನದ ಕೆಲಸಕ್ಕಾಗಿ ಜನ ಹುಡುಕಾಟ ನಡೆಸುತ್ತಿದ್ದಾರೆ.

ಕೆಲಸ ತೊರೆಯಲು ಪ್ರಮುಖ ಕಾರಣ

* ಕಡಿಮೆ ಸಂಬಳ/ಸಂಬಳ ಕಡಿತ

* ಅತಿಯಾದ ಒತ್ತಡ (Burnout)

* ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದಿರುವುದು, ‘ಹೊಂದಾಣಿಕೆ’ ಬದುಕು ಸಾಕೆನಿಸಿರುವುದು.

* ಪದೇಪದೆ ವರ್ಗಾವಣೆ, ಕುಟುಂಬದಿಂದ ದೂರ ಇರುವುದು.

* ಕೊರೊನಾದ ಭಯ

* ಕಡಿಮೆ ಆದಾಯದಲ್ಲೂ ‘ಸಂತೃಪ್ತಿ’ಯಿಂದ ಬದುಕಬೇಕು ಎಂಬ ಮನೋಭಾವ

* ಕೊರೊನಾ ನಂತರದ ದಿನಗಳಲ್ಲಂತೂ ಉಳಿದಿರುವ ಆಯಸ್ಸನ್ನು ಒತ್ತಡದಲ್ಲಿ ಕಳೆದುಬಿಡಬಾರದು ಎಂಬುದು ಬಹುತೇಕರ ಮನದಾಳ.

ವಿವೇಚನೆಯಿಂದ ನಿರ್ಧರಿಸಿ

* ನೌಕರಿಯಿಂದ ಇಎಂಐ, ಕುಟುಂಬದ ಅಗತ್ಯಗಳು ನೀಗುತ್ತಿದ್ದರೆ, ಸೋಮವಾರ ಕೆಲಸಕ್ಕೆ ಹೋಗಲು ಖುಷಿಯಾಗುತ್ತಿದ್ದರೆ ನೌಕರಿ ಬಿಡುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

* ನೌಕರಿಯಿಂದ ಭದ್ರತೆ, ಫ್ರೀಲಾನ್ಸಿಂಗ್​ನಿಂದ ಒಂದಷ್ಟು ಸ್ವಾತಂತ್ರ್ಯ ಸಿಗುತ್ತದೆ. ಆದ್ಯತೆ ಯಾವುದು ಎಂಬು ದನ್ನು ನಾವೇ ನಿರ್ಧರಿಸಬೇಕು.

* ಹೊಸ ಕೌಶಲಗಳನ್ನು ಕಲಿಯದೆ, ಹೊರಗಿನ ಮಾರುಕಟ್ಟೆ ಸ್ಥಿತಿ ಅರಿಯದೆ ನವೋದ್ಯಮದ ಸಾಹಸಕ್ಕೆ ಮುಂದಾಗದಿರಿ.

ಅಮೆರಿಕದಲ್ಲಿ ಕೆಲಸಗಾರರ ತೀವ್ರ ಕೊರತೆ

ಪ್ರತ್ಯಕ್ಷ ಚಿತ್ರಣ

| ಬೆಂಕಿ ಬಸಣ್ಣ ನ್ಯೂಯಾರ್ಕ್

ಕಳೆದ ಎರಡು ವರ್ಷಗಳಿಂದ ಅಮೆರಿಕವು ಕರೊನಾ ಸೋಂಕಿನಿಂದ ತತ್ತರಿಸಿದೆ. ಈವರೆಗೆ ಅಮೆರಿಕದಲ್ಲಿ ಒಟ್ಟು 4.76 ಕೋಟಿ ಜನರು ಸೋಂಕುಬಾಧಿತರಾಗಿದ್ದು, 7.69 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷ ಕೋವಿಡ್​ನಿಂದಾಗಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಬಿದ್ದುಹೋಗಿತ್ತು. ಅನೇಕ ತಿಂಗಳುಗಳ ಕಾಲ ವಿಸ್ತರಿಸಿದ ಲಾಕ್​ಡೌನ್​ನಿಂದಾಗಿ ಜನರು ಮನೆಯಲ್ಲಿಯೇ ಇರುವ ಪರಿಸ್ಥಿತಿ ಬಂದು ನಿರುದ್ಯೋಗ ಸಮಸ್ಯೆ ದಾಖಲೆ ಪ್ರಮಾಣವಾದ ಶೇಕಡ 14.7ಕ್ಕೆ ಏರಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದ ಆರ್ಥಿಕ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಆಗಿನ ಟ್ರಂಪ್ ಸರ್ಕಾರವು ಆರ್ಥಿಕ ಉತ್ತೇಜಕ ಮತ್ತು ಪರಿಹಾರ ಪ್ಯಾಕೇಜುಗಳನ್ನು ನಾಲ್ಕು ಬಾರಿ ಘೊಷಿಸಿತ್ತು. ಮನೆಯಲ್ಲಿದ್ದ ಜನರಿಗೆ ಪ್ರತಿ ತಿಂಗಳು ಸಾವಿರಾರು ಡಾಲರ್​ಗಳಷ್ಟು ನಿರುದ್ಯೋಗ ಭತ್ಯೆಯನ್ನು ಉಚಿತವಾಗಿ ಕೊಟ್ಟಿತ್ತು. ಅನೇಕ ತಿಂಗಳುಗಳ ಕಾಲ ಬಾಡಿಗೆ ಕೊಡದಿದ್ದರೂ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕದಂತೆ ಕಾನೂನು ತಂದಿತ್ತು. ಹೋದವರ್ಷ ಕರೊನಾ ಕಷ್ಟಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಪ್ರತಿವಾರವೂ ಪ್ರತಿ ವ್ಯಕ್ತಿಗೆ ಸುಮಾರು ಹದಿನೈದು ನೂರು ಡಾಲರ್​ಗಳನ್ನು ನಿರುದ್ಯೋಗ ಭತ್ಯೆಯಾಗಿ ನೀಡುತ್ತಿದ್ದವು. ಗಂಡ ಮತ್ತು ಹೆಂಡತಿ ಸೇರಿ ಪ್ರತಿವಾರ 3 ಸಾವಿರ ಡಾಲರ್ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದರು. ಈ ಮೊತ್ತವು ಬಡವರ್ಗದವರು, ಕಾರ್ವಿುಕರು ಪಡೆಯುತ್ತಿದ್ದ ಸರಾಸರಿ ಸಂಬಳಕ್ಕಿಂತ ಬಹಳಷ್ಟು ಜಾಸ್ತಿಯಾಗಿತ್ತು.

ಬದಲಾದ ಪರಿಸ್ಥಿತಿ: ಕರೊನಾ ಲಸಿಕೆಗಳು ಬಂದ ನಂತರ ಅಮೆರಿಕದಲ್ಲಿ ಈ ವರ್ಷ ಆರ್ಥಿಕ ಪರಿಸ್ಥಿತಿ ತುಂಬ ಸುಧಾರಿಸಿದೆ. ಈಗ ಎಲ್ಲೆಲ್ಲೂ ಕೆಲಸಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಜನರೇ ಸಿಗುತ್ತಿಲ್ಲ. ಕೆಲಸದವರು ಸಿಗುತ್ತಿಲ್ಲವೆಂದು ಅನೇಕ ಹೋಟೆಲ್, ಅಂಗಡಿ, ಉದ್ದಿಮೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ನುರಿತ ಕಾರ್ವಿುಕರ ಕೊರತೆ ಎಲ್ಲ ಕ್ಷೇತ್ರಗಳಲ್ಲೂ ತೀವ್ರವಾಗಿ ಕಾಡುತ್ತಿದೆ. ಈಗ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಒಂದು ಹೊಸ ಕಾರ್ ಖರೀದಿಮಾಡಿದ ನಂತರ, ಅದು ಡೆಲಿವರಿ ಆಗಲು ಅನೇಕ ತಿಂಗಳುಗಳ ಕಾಲ ಕಾಯಬೇಕು. ನಮ್ಮ ಮನೆಯ ಕಾರ್ಪೆಟ್ ಬದಲಾಯಿಸಲು ಮೂರು ತಿಂಗಳು ಕಾದೆವು ಎಂದರೆ ಊಹಿಸಿ! ಇಂದಿನ ಈ ಬದಲಾದ ಪರಿಸ್ಥಿತಿಗೆ ಅನೇಕ ಕಾರಣಗಳಿವೆ. ಉಚಿತವಾಗಿ ಬರುವ ನಿರುದ್ಯೋಗ ಭತ್ಯೆಗೆ ಒಗ್ಗಿಹೋಗಿರುವ ಜನ ಮತ್ತೆ ಮೈಬಗ್ಗಿಸಿ ದುಡಿಯಲು ಅರೆಮನಸ್ಸು ಮಾಡುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದವರು (ವರ್ಕ್ ಫ್ರಮ್ ಹೋಮ್ ಟ್ರಾಫಿಕ್​ಜಾಮ್ ಸಮಸ್ಯೆ ಮತ್ತು ಹೆಚ್ಚಿರುವ ಪೆಟ್ರೋಲ್ ಬೆಲೆಗೆ ಹೆದರಿ ಮತ್ತೆ ಆಫೀಸಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇನ್ನೂ ಕೆಲವು ಜನರು ಮಾಸ್ಕ್ ಧರಿಸಲು, ಕರೊನಾ ಲಸಿಕೆ ಹಾಕಿಸಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು ಇದರ ಪರಿಣಾಮ ಅಮೆರಿಕದಲ್ಲಿ ಎಲ್ಲ ವಸ್ತುಗಳ ಬೆಲೆಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ‘ಥ್ಯಾಂಕ್ಸ್ ಗಿವಿಂಗ್’ ಮತ್ತು ಕ್ರಿಸ್​ವುಸ್ ಹಬ್ಬಗಳು ಸದ್ಯದಲ್ಲಿ ಬರಲಿದ್ದು, ಜನಸಂದಣಿಯಿಂದಾಗಿ ಮತ್ತೆ ಕರೊನಾ ಅಲೆ ಅಮೆರಿಕವನ್ನು ಅಪ್ಪಳಿಸುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ ತಂತ್ರಜ್ಞಾನ ಮತ್ತು ಸಾಫ್ಟ್​ವೇರ್ ಕ್ಷೇತ್ರದಲ್ಲಿ ಸಹಿತ ನುರಿತ ಸಿಬ್ಬಂದಿಯ ತೀವ್ರ ಕೊರತೆ ಇರುವುದರಿಂದ ಭಾರತೀಯರ H1B rejection (ತಿರಸ್ಕಾರಗೊಳ್ಳುವ) ಸಂಖ್ಯೆ ತುಂಬ ಕಡಿಮೆ ಆಗುವ ಸಾಧ್ಯತೆ ಇದೆ. ಇದು ಅಮೆರಿಕಕ್ಕೆ ಬರಲು ಇಚ್ಛಿಸುವ ಭಾರತೀಯರಿಗೆ ಒಳ್ಳೆಯ ಸುದ್ದಿ ಆಗಲಿದೆ.

ಕೃಪೆ: ವಿಜಯವಾಣಿ

Edited By : Vijay Kumar
PublicNext

PublicNext

12/12/2021 08:51 am

Cinque Terre

24.3 K

Cinque Terre

1

ಸಂಬಂಧಿತ ಸುದ್ದಿ