ವಾಷಿಂಗ್ಟನ್: ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓ ಗಳ ಜತೆ ಸಭೆ ನಡೆಸಿದ್ದಾರೆ. ಐದು ವಿಭಿನ್ನ ಕ್ಷೇತ್ರಗಳಿಗೆ ಸೇರಿದ ಕಂಪನಿಗಳ ಸಿಇಒಗಳು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಮೋದಿ ಅವರ 5 ದಿನಗಳ ಅಮೆರಿಕ ಪ್ರವಾಸದಲ್ಲಿ 5 ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ.
1. ಕ್ವಾಡ್: ಇದು ಆಸ್ಟ್ರೇಲಿಯಾ, ಇಂಡಿಯಾ, ಜಪಾನ್, ಅಮೆರಿಕಗಳ ವ್ಯೂಹಾತ್ಮಕ ಸಂಘಟನೆ. ಭಾರತ ಕೇಂದ್ರಿತ ನೀತಿಗೆ ಅನುಗುಣವಾಗಿ ರಚನೆಯಾದ ಪಾಲುದಾರಿಕೆ ಇದು. ಅಮೆರಿಕ ಭೇಟಿ ವೇಳೆ ಸೆ. 24ರಂದು ಕ್ವಾಡ್ ನಾಯಕರ ಜತೆಗೆ ಮಾತುಕತೆ ನಿಗದಿಯಾಗಿದೆ. ಆಕಸ್ ಡೀಲ್ ಮತ್ತು ಇತರೆ ವಿಚಾರಗಳು ಗಮನಸೆಳೆದಿವೆ.
2. ತಾಲಿಬಾನ್: ಅಫ್ಘನ್ನಲ್ಲಿ ತಾಲಿಬಾನ್ ಆಡಳಿತ ಮತ್ತು ನಂತರದ ಬೆಳವಣಿಗೆಗಳು ಜಗತ್ತನ್ನು ಚಿಂತೆಗೆ ದೂಡಿವೆ. ಭಾರತದ ಮಟ್ಟಿಗೆ ದೊಡ್ಡ ಸುರಕ್ಷಾ ಬೆದರಿಕೆ ಎದುರಾಗಿದೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇತರೆ ರಾಷ್ಟ್ರ ನಾಯಕರೊಂದಿಗೆ ಮಾತುಕತೆ ನಡೆಯಲಿದೆ.
3. ಚೀನಾದ ಬೆದರಿಕೆ: ಚೀನಾದ ಜತೆಗಿನ ಭಾರತದ ಬಾಂಧವ್ಯದಲ್ಲಿ ವಿಶ್ವಾಸದ ಕೊರತೆ ಎದ್ದುಕಾಣತೊಡಗಿದೆ. ಕಳೆದ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಇದು ಆರಂಭವಾಗಿದ್ದು, ಈಗ ತಾಲಿಬಾನ್ ಆಡಳಿತಕ್ಕೆ ಅಫ್ಘನ್ ಬಿದ್ದಿರುವ ಕಾರಣ ಇನ್ನಷ್ಟು ಭದ್ರತಾ ಬೆದರಿಕೆ ಭಾರತಕ್ಕೆ ಎದುರಾಗಿದೆ. ಭಾರತ ಕೇಂದ್ರಿತ ಕ್ವಾಡ್ ಬಗ್ಗೆ ಚೀನಾಕ್ಕೆ ಅಸಮಾಧಾನವಿದೆ.
4. ಕಾಶ್ಮೀರ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನ ಪದೇಪದೆ ಪ್ರಸ್ತಾಪಿಸುತ್ತಿದೆ. ತಾಲಿಬಾನ್ ಕೂಡ ಕಾಶ್ಮೀರಿ ಮುಸ್ಲಿಮರ ಪರ ಧ್ವನಿ ಎತ್ತುವುದಾಗಿ ಹೇಳಿದೆ. ಈ ಬೆಳವಣಿಗೆ ಭಾರತಕ್ಕೆ ಇನ್ನಷ್ಟು ಸುರಕ್ಷಾ ಬೆದರಿಕೆಯನ್ನು ಒಡ್ಡಿದೆ.
5. ಲಸಿಕೆ ಅಭಿಯಾನ: ಕೋವಿಡ್ 19 ಸಂಕಷ್ಟದಿಂದ ಪಾರಾಗಲು ಲಸಿಕೆ ಪೂರೈಕೆ ವಿಚಾರ ವಿಶ್ವಸಂಸ್ಥೆ ಸಭೆಯಲ್ಲಿ ಚರ್ಚೆಗೆ ಒಳಗಾಗಲಿದೆ. ಬ್ರಿಟನ್ನ ಲಸಿಕೆ ಪ್ರಮಾಣ ಪತ್ರ ನೀತಿಯನ್ನು ಭಾರತ ಖಂಡಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲದರಲ್ಲೂ ಸವಾಲುಗಳನ್ನು ಎದುರಿಸುತ್ತ ಮುಂದೆ ಸಾಗುತ್ತಿದೆ.
ವೇಳಾಪಟ್ಟಿ ಪ್ರಕಾರ ಅಫ್ಘನ್ ಪ್ರತಿನಿಧಿ ಸೆ.27ಕ್ಕೆ ಮಾತನಾಡಲು ಸಮಯ ನಿಗದಿಯಾಗಿದೆ.
PublicNext
24/09/2021 07:47 am