ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮತ್ತೆ ಬಾಂಬ್ ದಾಳಿ ನಡೆಸುವ ಭೀತಿ ಉಂಟಾಗಿದೆ. ಹೀಗಾಗಿ ಅಮೆರಿಕನ್ ಪ್ರಜೆಗಳಿಗೆ ತಕ್ಷಣವೇ ಆ ಜಾಗ ಖಾಲಿ ಮಾಡುವುದು ಒಳ್ಳೆಯದು ಎಂದು ಅಮೆರಿಕ ಸರ್ಕಾರ ಹೇಳಿದೆ.
ಮುಂದಿನ 24ರಿಂದ 36 ಗಂಟೆಗಳಲ್ಲಿ ಕಾಬೂಲ್ ಏರ್ಪೋರ್ಟ್ನಲ್ಲಿ ಮತ್ತೊಂದು ದಾಳಿ ನಡೆಯಬಹುದು ಎಂಬ ಮಾಹಿತಿ ಹಿನ್ನೆಲೆ ಅಮೆರಿಕ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಕಮಾಂಡರ್ಗಳು ಮತ್ತೊಂದು ಉಗ್ರರ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಬೂಲ್ ಏರ್ಪೋರ್ಟ್, ಸೌತ್ ಗೇಟ್, ಆಂತರಿಕ ಸಚಿವಾಲಯ, ಪಂಜ್ಶಿರ್ ಪೆಟ್ರೋಲ್ ಸ್ಟೇಷನ್ ಗಳಲ್ಲಿರುವ ಅಮೆರಿಕನ್ನರು ತಕ್ಷಣವೇ ಜಾಗ ಖಾಲಿ ಮಾಡಿ ಎಂದು ಅಮೆರಿಕನ್ ಎಂಬಸ್ಸಿ ವಾರ್ನಿಂಗ್ ಮಾಡಿದೆ.
ಕಾಬೂಲ್ ವಿಮಾನ ನಿಲ್ದಾಣಕ್ಕೆ ದಾಳಿ ಭೀತಿ ಇರುವುದು ಖಚಿತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ವಿಮಾನ ನಿಲ್ದಾಣದ ಸುತ್ತ ಇರುವ ಅಮೆರಿಕ ನಾಗರಿಕರು ತಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಕಾಬೂಲ್‌ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯೂ ಎಚ್ಚರಿಕೆ ನೀಡಿದೆ.
ಕಳೆದ ಗುರುವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 13 ಮಂದಿ ಅಮೆರಿಕದ ಸೈನಿಕರು ಸೇರಿದಂತೆ 78 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆಯು ಶನಿವಾರ ಬೆಳಿಗ್ಗೆ ಡ್ರೋನ್ ದಾಳಿ ನಡೆಸಿದ್ದು, ಇಬ್ಬರು ಐಸಿಸ್ ಉಗ್ರರು ಹತರಾಗಿದ್ದರು.
PublicNext
29/08/2021 07:25 am