ಅಬುಧಾಬಿ: ಅಫ್ಘಾನಿಸ್ತಾನವನ್ನು ತಾನಿಬಾನ್ ಉಗ್ರರರು ವಶಪಡಿಸಿಕೊಳ್ಳುತ್ತಿದ್ದಂತೆ ದೇಶದಿಂದ ಕಾಲ್ಕಿತ್ತ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆಯುವ ಸಂದರ್ಭದಲ್ಲಿ ನಾನು ಹಣ ತಂದಿಲ್ಲ ಎಂದಿದ್ದಾರೆ. ದೇಶದಿಂದ ಪಲಾಯನಗೈದಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ, ತಾನು ತಾಲಿಬಾನ್ ಮತ್ತು ಉನ್ನತ ಮಾಜಿ ಅಧಿಕಾರಿಗಳ ನಡುವಿನ ಮಾತುಕತೆಗಳನ್ನು ಬೆಂಬಲಿಸುವುದಾಗಿ ಹೇಳಿದರು.
ತಾನು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪಲಾಯನಗೈಯ್ಯುವ ಮುನ್ನ ದೊಡ್ಡ ಮೊತ್ತದ ಹಣವನ್ನು ದೇಶದ ಹೊರಗೆ ಸಾಗಿಸಿರುವ ಕುರಿತಾದ ಆರೋಪಗಳನ್ನು ನಿರಾಕರಿಸಿದ್ದಾರೆ. "ನನ್ನನ್ನು ದೇಶದಿಂದ ಹೇಗೆ ಹೊರದಬ್ಬಲಾಯಿತೆಂದರೆ ನನಗೆ ನನ್ನ ಚಪ್ಪಲಿ ತೆಗೆದು ಬೂಟುಗಳನ್ನು ಹಾಕುವಷ್ಟೂ ಅವಕಾಶ ನೀಡಲಾಗಿರಲಿಲ್ಲ,'' ಎಂದು ಹೇಳಿದ ಅವರು ಎಮಿರೇಟ್ಸ್ ಗೆ ಬರಿಗೈಯ್ಯಲ್ಲಿ ಬಂದಿದ್ದಾಗಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಪಲಾಯನಗೈದ ನಂತರ ಮೊದಲ ಬಾರಿ ಬುಧವಾರ ವೀಡಿಯೋ ಸಂದೇಶ ಬಿಡುಗಡೆಗೊಳಿಸಿದ ಅಶ್ರಫ್ ಘನಿ, ತಮ್ಮ ದೇಶದಲ್ಲಿ ಇನ್ನಷ್ಟು ರಕ್ತಪಾತವಾಗುವುದನ್ನು ತಡೆಯಲು ದೇಶ ತೊರೆದಿದ್ದಾಗಿ ಹೇಳಿದ್ದಾರೆ. ಅವರ ಫೇಸ್ ಬುಕ್ ಪುಟದಲ್ಲಿ ಈ ವೀಡಿಯೋ ಸಂದೇಶ ಪೋಸ್ಟ್ ಮಾಡಲಾಗಿದ್ದು, ತನಗೆ ಗಲ್ಫ್ ರಾಷ್ಟ್ರದಲ್ಲಿ ಉಳಿದುಕೊಳ್ಳುವ ಉದ್ದೇಶವಿಲ್ಲ ಹಾಗೂ ಮರಳಿ ಸ್ವದೇಶಕ್ಕೆ ವಾಪಸಾಗಲು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಯುಕ್ತ ಅರಬ್ ಸಂಸ್ಥಾನ ಕೂಡ ಘನಿ ಅವರು ತನ್ನ ದೇಶದಲ್ಲಿದ್ದಾರೆ ಹಾಗೂ ಮಾನವೀಯ ಕಾರಣದಿಂದ ಅವರಿಗೆ ಇಲ್ಲಿ ಆಶ್ರಯ ನೀಡಲಾಗಿದೆ ಎಂದು ಹೇಳಿದೆ.
PublicNext
19/08/2021 01:46 pm