ಸಿಡ್ನಿ: ತುಳುನಾಡಿನ ವಿಶೇಷ ಹಬ್ಬ ಆಟಿಡೊಂಜಿ ದಿನವನ್ನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿರುವ ತುಳುವರು ಸಿಡ್ನಿಯಲ್ಲಿ ಜು.17ರಂದು ಸಂಭ್ರಮದಿಂದ ಆಚರಿಸಿದರು.
ತುಳುಕೂಟ ಸಿಡ್ನಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಶೃತಿ, ಮೇಘನಾ, ರಂಜೀತಾ, ವೀಣಾ ಹಾಗೂ ಶ್ರೇಯಾ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುರೇಶ್ ಪೂಂಜಾ, ಆಟಿಯ ಮಹತ್ವ ವಿವರಿಸಿ, ತುಳು ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಯುವಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕರೆ ನೀಡಿದರು. ಬಳಿಕ ಆಟಿಡೊಂಜಿ ದಿನದ ಮಹತ್ವದ ವಿವರಿಸಲಾಯಿತು.
ತುಳುನಾಡ ಖಾದ್ಯಗಳಾದ ಕುಡುಸಾರು, ಕುಡುಚಟ್ಟಿ, ಸೇಮೆ, ಕೋರಿ ಸುಕ್ಕ, ಕೋರಿ ಗಸಿ, ಪುಂಡಿ, ಸೇಮೆದಡೆ, ಶಾವಿಗೆ ಹಾಲು ಸೇರಿ 14ಕ್ಕೂ ಹೆಚ್ಚು ಭಕ್ಷ್ಯ ಭೋಜನ ಉಣಬಡಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ತುಳುವರು ಭಾಗಿಯಾಗಿದ್ದು ಹಲವು ಪಂದ್ಯಾಟಗಳನ್ನು ಆಯೋಜಿಸಲಾಗಿತ್ತು
ಅಕ್ಷತಾ ಅವರು ಪ್ರಾರ್ಥನಾ ಗೀತೆ ಹಾಡಿದರು.ಅವಕಾಶ್ ಹಾಗೂ ಸುಮಿತ್ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವದ 'ಸಿಡ್ನಿ ಸ್ಪೋರ್ಟ್ ಕ್ಲಬ್'ನ ಸುಪ್ರೀತ್ ಶಂಭು ಸೇರಿ ಹಲವರ ಸಹಕಾರವನ್ನು ಸ್ಮರಿಸಿದರು.
PublicNext
19/07/2022 11:51 am