ರಿಯಾದ್(ಸೌದಿ ಅರೇಬಿಯಾ): ಭಾರತದ ತಬ್ಲಿಘಿ ಜಮಾತ್ ಅಪಾಯಕಾರಿಯಾಗಿದೆ. ಅದರಿಂದ ದೂರ ಇರಿ ಎಂದು ಸೌದಿ ಅರೇಬಿಯಾ ತನ್ನ ಪ್ರಜೆಗಳಿಗೆ ಸೂಚಿಸಿದೆ. ಮುಂದಿನ ಶುಕ್ರವಾರ ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ವೇಳೆ ಸಂಘಟನೆ, ತಬ್ಲಿಘಿ ಸಂಘಟನೆಯ ತಪ್ಪು ಮಾರ್ಗದರ್ಶನ ಅದರ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವಂತೆ ಸೌದಿ ಅರೇಬಿಯಾ ಸರ್ಕಾರ ಎಲ್ಲ ಮಸೀದಿಗಳ ಮುಖ್ಯಸ್ಥರಿಗೆ ಸೂಚಿಸಿದೆ.
ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವ ಡಾ.ಅಬ್ದುಲ್ಲತೀಫ್ ಆಲ್-ಶೇಖ್ ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಮುಂದಿನ ಶುಕ್ರವಾರ ಪ್ರಾರ್ಥನೆ ನಡೆಯುವ ಎಲ್ಲಾ ಮಸೀದಿಗಳಲ್ಲೂ ಬೋಧಕರು ತಬ್ಲೀಘಿ ಮತ್ತು ದಾವಾ ಸಂಘಟನೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಬೇಕು. ಬೋಧಕರು ಮುಖ್ಯವಾಗಿ ಈ ಕೆಳಕಂಡ 4 ಅಂಶಗಳ ಬಗ್ಗೆ ಪ್ರಸ್ತಾಪಿಸಬೇಕು ಎಂದಿದ್ದಾರೆ. ಆ ಅಂಶಗಳ ಈ ಕೆಳಕಂಡಂತಿವೆ.
1. ಈ ಸಂಘಟನೆಗಳ ಪ್ರಮುಖ ತಪ್ಪು ನಡೆಗಳ ಬಗ್ಗೆ ವಿವರಣೆ ನೀಡಬೇಕು.
2. ಈ ಸಂಘಟನೆಗಳ ತಪ್ಪು ಮಾರ್ಗದರ್ಶನ, ಅವುಗಳ ಅಡ್ಡದಾರಿ, ಸಂಘಟನೆಗಳಿಂದ ಇರುವ ಅಪಾಯ ಮತ್ತು ಇವು ಭಯೋತ್ಪಾದನೆಗೆ ಹೆಬ್ಬಾಗಿಲು ಎಂಬುದರ ಬಗ್ಗೆ ಎಚ್ಚರಿಸಬೇಕು.
3. ಈ ಸಂಘಟನೆಗಳ ಯಾವುದೇ ನಂಟು ಹೊಂದುವುದನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.
4. ಈ ಸಂಘಟನೆಗಳಿಂದ ಸಮಾಜಕ್ಕೆ ಇರುವ ಅಪಾಯಗಳ ಬಗ್ಗೆ ತಿಳುವಳಿಕೆ ಕೊಡಬೇಕು ಎಂದು ಸರ್ಕಾರ ಮಸೀದಿಗಳಿಗೆ ಸೂಚಿಸಿದೆ.
PublicNext
12/12/2021 04:02 pm