ಜಕಾರ್ತಾ: 78 ವರ್ಷದ ಅಜ್ಜ 17ರ ಹರೆಯದ ಹುಡುಗಿಯನ್ನು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದ.
ಆದರೆ ವಿಪರ್ಯಾಸವೆಂಬಂತೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ.
ಅದೂ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.
ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ದಂಪತಿಯನ್ನು 78 ವರ್ಷದ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಜೋಡಿ ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃದ್ಧ ಹಾಗೂ ಹುಡುಗಿಯ ಮಧ್ಯೆ ವಯಸ್ಸಿನ ವ್ಯತ್ಯಾಸ ಹೆಚ್ಚಿದ್ದರಿಂದ ಈ ವಿವಾಹ ತುಂಬಾ ಗಮನಸೆಳೆದಿತ್ತು.
ವೃದ್ಧ ಅಬಾ ಸರ್ನಾ ಅವರು ವಿಚ್ಛೇದನ ಪತ್ರ ಕಳುಹಿಸಿದ್ದಕ್ಕೆ 17 ವರ್ಷದ ನೋನಿ ಹಾಗೂ ಕುಟುಂಬದವರಿಗೆ ಆಘಾತವಾಗಿದೆ.
ಅವರಿಬ್ಬರ ಸಂಬಂಧದ ಬಗ್ಗೆ ಹುಡುಗಿಗಾಗಲಿ ಅಥವಾ ಕುಟುಂಬದವರಿಗಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಈ ರೀತಿ ಮಾಡಿದ್ದಕ್ಕೆ ತುಂಬಾ ಆಘಾತವಾಗಿದೆ ಎಂದು ನೋನಿ ಸಹೋದರಿ ಅಯಾನ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿವಾಹವಾಗುವುದಕ್ಕೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರಿಂದ ದಂಪತಿ ಬೇರೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಯಾನ್ ಇದನ್ನು ನಿರಾಕರಿಸಿದ್ದಾರೆ.
ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
PublicNext
05/11/2020 10:32 am