ವಾಷಿಂಗ್ಟನ್: ಅಮೆರಿಕದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತ ಮೂಲದ ಇಬ್ಬರು ವಿದ್ಯಾರ್ಥಿಗಳು, ಕಾರು ಚಾಲಕಿ ಸೇರಿ ಮೂವರು ಸಾವನ್ನಪ್ಪಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ತೆಲಂಗಾಣದ ವಂಶಿ ಕೃಷ್ಣ ಪೆಚೆಟ್ಟಿ ಮತ್ತು ಪವನ್ ಸ್ವರ್ಣ ಎಂದು, ಗಾಯಾಳುಗಳನ್ನು ಕಲ್ಯಾಣ್ ದೋರ್ಣ, ಕಾರ್ತಿಕ್ ಕಾಕುಮಾನು ಮತ್ತು ಯಶವಂತ ಉಪ್ಪಲಪಾಟಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಯುಎಸ್‌ನ ಸದರ್ನ್ ಇಲಿನಾಯ್ಸ್ ಯೂನಿವರ್ಸಿಟಿ ಕಾರ್ಬೊಂಡೇಲ್ (SIU)ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಪೆಚೆಟ್ಟಿ ಮತ್ತು ಸ್ವರ್ಣಾ ಅವರ ಮೃತದೇಹಗಳು ಸೋಮವಾರದ ವೇಳೆಗೆ ಹೈದರಾಬಾದ್ ತಲುಪುವ ನಿರೀಕ್ಷೆಯಿದೆ. ಕಾರಿನ ಚಾಲಕಿ ಮೆಯುನಿಯರ್, ಇಲಿನಾಯ್ಸ್ ರೂಟ್ 3ರಲ್ಲಿ ದಕ್ಷಿಣದ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಧ್ಯದ ರೇಖೆಯನ್ನು ದಾಟಿ ಇತರೆ ವಾಹನದ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾಳೆ. ಮೆಯುನಿಯರ್, ಪೆಚೆಟ್ಟಿ ಮತ್ತು ಸ್ವರ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್ ಸ್ಟೇಟ್ ಪೊಲೀಸ್ ಪೋಸ್ಟ್ ಮಾಡಿದ್ದಾರೆ.
ಯುಎಸ್ ನ ಸದರ್ನ್ ಇಲಿನಾಯ್ಸ್ ಯೂನಿವರ್ಸಿಟಿ ಕಾರ್ಬೊಂಡೇಲ್, ಸಾವನ್ನಪ್ಪಿದ್ದ ವಿದ್ಯಾರ್ಥಿಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಗಾಯಗೊಂಡವರು ಗುಣಮುಖರಾಗಲಿ ಎಂದು ಆಶಿಸಿ ಪೋಸ್ಟ್ ಮಾಡಿದ್ದಾರೆ.
PublicNext
24/04/2022 07:34 pm