ದಾವಣಗೆರೆ: ದಾವಣಗೆರೆ ನಗರದ ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಅಂಡರ್ ಬ್ರಿಡ್ಜ್ ನಲ್ಲಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಆಗಾಗ್ಗೆ ಇಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಅನುಭವಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಬೇಸಿಗೆಯಲ್ಲಿಯೂ ನೀರು ತುಂಬಿಕೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರೈಲ್ವೆ ಕೆಳ ಸೇತುವೆಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ವೇಳೆ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಹರಿಯುತ್ತಿರುವುದು ಹಾಗೂ ಜನರು ಪರದಾಟ ನಡೆಸುತ್ತಿದ್ದನ್ನು ವೀಕ್ಷಿಸಿದರು.
ಮಳೆಗಾಲದಲ್ಲಿ ಆಳೆತ್ತರದ ನೀರು ತುಂಬಿಕೊಂಡು ಜನರು ಅನುಭವಿಸುವ ಕಿರಿಕಿರಿ ಅಷ್ಟಿಷ್ಟಲ್ಲ. ಮಹಾನಗರ ಪಾಲಿಕೆಯ ವತಿಯಿಂದ ಸ್ವಯಂಚಾಲಿತ ಮೋಟಾರ್ ಅಳವಡಿಸಿದ್ದರೂ ಪ್ರಯೋಜನ ಮಾತ್ರ ಸಮರ್ಪಕವಾಗಿಲ್ಲ.
ಇನ್ನು ಮೇಯರ್ ಆಗಿದ್ದ ಎಸ್. ಟಿ. ವೀರೇಶ್, ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲಾಗಿದೆ ಎಂದು ಹೇಳಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ.
ಬೇಸಿಗೆ ಕಾಲದಲ್ಲಿ ಹೀಗಾದರೆ ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬೇಡ? ಗುಂಡಿಯಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದಕ್ಕೆ ಜನ ಕಂಗಾಲಾಗಿದ್ದಾರೆ.
PublicNext
13/04/2022 02:09 pm