ದಾವಣಗೆರೆ: ದಾವಣಗೆರೆ ಜನರಿಗೆ ಕುಡಿಯುವ ನೀರಿನ ಜೀವಸೆಲೆಯಾದ ಕುಂದವಾಡ ಕೆರೆಯ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಈಗ ಮಾಡುತ್ತಿರುವ ಕೆಲಸದಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಕಾಮಗಾರಿಯ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಸುಮಾರು 12 ಕೋಟಿ ರೂಪಾಯಿಗೂ ಹೆಚ್ಚು ಹಣದಲ್ಲಿ ನಡೆಸಲಾಗುತ್ತಿದೆ. ಹೂಳೆತ್ತುವ ಮೂಲಕ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡುವುದು ಈ ಕಾಮಗಾರಿಯ ಉದ್ದೇಶ. ಆದ್ರೆ ಕೆರೆಯಲ್ಲಿನ ಹೂಳು ಸಮರ್ಪಕವಾಗಿ ತೆಗೆಯುತ್ತಿಲ್ಲ. ಅಲ್ಲಲ್ಲಿ ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ. ಮೂರು ಅಡಿ ಆಳದವರೆಗೆ ಹೂಳು ತೆಗೆದು ಹೊರಹಾಕಿದರೆ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕ. ಜೊತೆಗೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಹಲವಾರು ದೂರಗಳು ಕೇಳಿ ಬಂದ ಕಾರಣ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಕಾಮಗಾರಿ ಕಳಪೆಯಿಂದ ಕೂಡಿದ್ದು ಕಂಡು ಬಂದಿದೆ. ಸ್ಥಳಕ್ಕೆ ಗಡಿಗುಡಾಳ್ ಮಂಜುನಾಥ್ ಬರುತ್ತಿದ್ದಂತೆ ವಾಯುವಿಹಾರಿಗಳು, ಸ್ಥಳೀಯರು ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಣ್ಣು ತೆಗೆದು ಹೊರ ಹಾಕುತ್ತಿಲ್ಲ. ಹೆಸರಿಗಷ್ಟೇ ಹೂಳೆತ್ತುವ ಕೆಲಸ ಮಾಡುತ್ತಿದೆ. ಚೆನ್ನಾಗಿ ಇದ್ದ ಕೆರೆ ಹಾಳು ಮಾಡಲಾಗುತ್ತಿದೆ. ಹೊಸ ಪರಿಕರ ಬಳಕೆ ಮಾಡಿಲ್ಲ. ಹಳೆಯ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ. ವಾಕಿಂಗ್ ಮಾಡಲು ಆಗದ ರೀತಿ ಇದೆ. ಕಲ್ಲುಗಳನ್ನು ಅಳವಡಿಕೆ ಮಾಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ನೀವು ಧ್ವನಿ ಎತ್ತಬೇಕೆಂದು ಮನವಿ ಮಾಡಿದರು.
PublicNext
14/03/2022 01:27 pm