ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಂದಿ ಮತ್ತು ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವೇದಾವತಿ ನಗರ, ದೇವಗಿರಿ ನಗರ, ಸಂತೆ ಮೈದಾನ ಸೇರಿದಂತೆ ನಗರದ ಗಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಹಂದಿಗಳು ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಂದಿ ಮತ್ತು ನಾಯಿಗಳು ಬೈಕ್,ಆಟೋಗಳಿಗೆ ಅಡ್ಡ ಬರುತ್ತವೆ ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ಎನ್ನಲಾಗಿದೆ. ನಗರದ ಮಟನ್ ಮಾರ್ಕೆಟ್ ಮುಂಭಾಗದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ.
ಮತ್ತೊಂದು ಕಡೆ ರಾತ್ರಿಯಾದರೂ ಹಂದಿ ಮಾಲೀಕರು ಹಂದಿಗಳನ್ನು ಹೊಡೆದುಕೊಂಡು ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸತ್ತ ಪ್ರಾಣಿಗಳನ್ನು ಬಿಸಾಡಿದ್ದು, ಅದನ್ನು ಹಂದಿ ಮತ್ತು ನಾಯಿಗಳು ಎಳೆದು ಎಳೆದು ತಿನ್ನುವ ದೃಶ್ಯ ಗಮನಿಸಬಹುದಾಗಿದೆ. ನಗರಸಭೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಹಂದಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಬೇಕು ಇಲ್ಲವಾದರೆ ನಗರಸಭೆ ಸಿಬ್ಬಂದಿಗಳು ಹಂದಿ ಹಾಗೂ ನಾಯಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯವಾಗಿದೆ.
ಕಳೆದ ಇಪ್ಪತ್ತೈದು, ಮೂವತ್ತು ವರ್ಷಗಳಿಂದ ಬಗೆಹರಿಸಲಾಗದ ಸಮಸ್ಯೆಯಾಗಿದೆ. ಇಲ್ಲಿ ಪ್ರಭಾವಿಗಳ ಕೈವಾಡ ಇರುವುದರಿಂದ ಸಮಸ್ಯೆ ಹಾಗೆ ಉಳಿದಿದೆ ಎಂದು ಆರೋಪಿಸಿದರು. ಇನ್ನಾದರೂ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ನಗರಸಭಾ ಸದಸ್ಯ ಜಿ. ಪ್ರೇಮ್ ಕುಮಾರ್ ಒತ್ತಾಯಿಸಿದ್ದಾರೆ.
PublicNext
29/08/2021 02:26 pm