ಬೆಂಗಳೂರು: 10.9 ಗ್ರಾಂ ತೂಕವಿರುವ ಚಿನ್ನದ ನಾಣ್ಯ ಮೊಘಲ್ ಚಕ್ರವರ್ತಿ ಔರಂಗಜೇಬನ 5ನೇ ಪುತ್ರ ಕಮ್ ಬಕ್ಷ್ ನದ್ದಾಗಿದೆ. ಇಲ್ಲಿನ ಪ್ರಮುಖ ನಾಣ್ಯಶಾಸ್ತ್ರೀಯ ವೇದಿಕೆ, ಮರುಧಾರ್ ಆರ್ಟ್ಸ್ ಶನಿವಾರ ಹರಾಜು ಪ್ರಕ್ರಿಯೆ ನಡೆಸಿದ್ದು, ಕನ್ನಡಿಗೇತರ ಭಾರತೀಯ ವ್ಯಕ್ತಿಯೊಬ್ಬರು ಈ ನಾಣ್ಯವನ್ನು ರೂ.56 ಲಕ್ಷಕ್ಕೆ ಖರೀದಿ ಮಾಡಿದ್ದಾರೆಂದು ಹರಾಜು ಪ್ರಕ್ರಿಯೆ ಆಯೋಜಕ ಹಾಗೂ ಮರುಧಾರ್ ಆರ್ಟ್ಸ್ ನ ಸಿಇಒ ರಾಜೇಂದ್ರ ಮರು ಹೇಳಿದ್ದಾರೆ.
ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಚಿನ್ನದ ನಾಣ್ಯ ಇದಾಗಿದ್ದು ಈ ಚಿನ್ನದ ನಾಣ್ಯ ಬಹುತೇಕ ಚಲಾವಣೆಗೊಳ್ಳದೆ ಹಾಗೇ ಉಳಿದಿತ್ತು. ಹಾಗಾಗಿ, ಈ ನಾಣ್ಯ ವೈಶಿಷ್ಟ್ಯಪೂರ್ಣ ಎನಿಸಿಕೊಂಡಿತ್ತು.
ಕಮ್ ಬಕ್ಷ್ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದ. 1707ರಲ್ಲಿ ಬಿಜಾಪುರವನ್ನು (ಈಗಿನ ವಿಜಯಪುರ) ವಶಪಡಿಸಿಕೊಂಡ ಔರಂಗಜೇಬನ ಐದನೇ ಪುತ್ರ ಕಮ್ ಬಕ್ಷ್, ತನ್ನನ್ನು ತಾನು ರಾಜನೆಂದು ಘೋಷಿಸಿಕೊಂಡಿದ್ದ.
ಜನವರಿ 13, 1709ರಲ್ಲಿ ಕಮ್ ಬಕ್ಷ್ ಯುದ್ಧವೊಂದರಲ್ಲಿ ಸೆರೆಯಾಗಿದ್ದ. ಯುದ್ಧದಲ್ಲಿ ತೀವ್ರ ಗಾಯಗಳಾಗಿದ್ದ ಪರಿಣಾಮ ಮಾರನೇ ದಿನವೇ ಮೃತಪಟ್ಟಿದ್ದ.
ಈ ನಾಣ್ಯವು ವಿಶಿಷ್ಟ ಮತ್ತು ಪ್ರಮುಖವಾದದ್ದಾಗಿದೆ. ಬಿಜಾಪುರ, ಅಶಾನಬಾದ್, ನುಸ್ರತಾಬಾದ್, ಹೈದರಾಬಾದ್, ತೋರ್ಗಲ್, ಗೋಕಾಕ್, ಇಮ್ತಿಯಾಜ್ ಘರ್ ಮುಂತಾದೆಡೆಗಳ ನಾಣ್ಯ ಮುದ್ರಣ ಸ್ಥಳಗಳಿಂದ ಕಮ್ ಬಕ್ಷ್ ಕಾಲದ ನಾಣ್ಯವು ಪ್ರಖ್ಯಾತಿ ಹೊಂದಿದೆ.
PublicNext
28/02/2021 10:55 am