ಬೆಂಗಳೂರು : ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಶನಿವಾರ RAF ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಅನಾವರಣಗೊಳಿಸಿದ್ದಾರೆ. ಇವು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿದ್ದು, ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ, RAF ಘಟಕದ ಶಂಕುಸ್ಥಾಪನೆ ಫಲಕದಲ್ಲಿ ಕನ್ನಡವೇಕಿಲ್ಲ ಎಂದು ಶಾ ಮತ್ತು ಬಿಎಸ್ ವೈ ಅವರನ್ನು ಪ್ರಶ್ನಿಸಿದ್ದಾರೆ.
''ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು,ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಗೃಹ ಸಚಿವರೇ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ,ಕನ್ನಡಿಗರಿಗೆ ಮಾಡಿದ ಅಗೌರವ. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ..''ಎಂದು ಎಚ್ ಡಿಕೆ ಕಿಡಿಕಾರಿದ್ದಾರೆ.
''ಹಿಂದಿ-ಆಂಗ್ಲ ಭಾಷೆಯ ನಿಷ್ಠ ಧೋರಣೆಯಲ್ಲಿ ಕನ್ನಡ ಭಾಷೆಯನ್ನು ಅವಗಣನೆ ಮಾಡಿರುವ ಅಮಿತ್ ಶಾ ಅವರ ಧೋರಣೆ ಕನ್ನಡ ವಿರೋಧಿತನವನ್ನು ತೋರಿಸುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ. ಅಮಿತ್ ಶಾ ಅವರು ತ್ರಿಭಾಷಾ ಸೂತ್ರ ಉಲ್ಲಂಘಿಸಿರುವುದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು..'' ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧವೂ ಹರಿಹಾಯ್ದಿರುವ ಎಚ್ ಡಿಕೆ, ''ನಾಡು-ನುಡಿಯ ಘನತೆಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವವರಿಗೆ ಈ ರಾಜ್ಯದ ಆಡಳಿತ ನಡೆಸುವ ಅರ್ಹತೆ ಇಲ್ಲ. ಕೇಂದ್ರದ ಗೃಹಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ..''ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಿನಲ್ಲಿ RAF ಘಟಕದ ಅಡಿಗಲ್ಲು ಫಲಕದಿಂದ ಕನ್ನಡ ಕಣ್ಮರೆಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ತ್ರಿಭಾಷಾ ಸೂತ್ರ ಮರೆಯದಿರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.
PublicNext
17/01/2021 09:41 am