ತುಮಕೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ತರಿಗೆ ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳು ಹುಳು ಬಿದ್ದಿರುವ ಊಟ ವಿತರಿಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ.
ತುಮಕೂರು ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹೊಸಳ್ಳಯನ ತೋಟದಲ್ಲಿರುವ 30ಕ್ಕೂ ಹೆಚ್ಚು ಮನೆಗಳಿಗೆ ಅಕ್ಕ-ತಂಗಿ ಕೆರೆಯ ನೀರು ನುಗ್ಗಿದೆ. ಪರಿಣಾಮ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮನೆಯಿಂದ ಆಚೆ ಬರಲು ಪರದಾಡುವಂತಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಊಟ ವಿತರಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೂ ಸಂತ್ರಸ್ತರಿಗೆ ಹುಳು ಬಿದ್ದಿರುವ ಊಟ ನೀಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಪಾಲಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತವೂ ಸಹ ಸಂತ್ರಸ್ತರ ಬಗ್ಗೆ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
PublicNext
05/08/2022 11:39 am