ದಾವಣಗೆರೆ: ನಾವು ಸಣ್ಣ ಪುಟ್ಟ ಬೆಟ್ಟ ಗುಡ್ಡ ಹತ್ತಲಿಕ್ಕೆ ಹರಸಾಹಸ ಪಡುತ್ತೇವೆ. ನಮ್ಮ ಕೈಯಲ್ಲಿ ಆಗಲ್ಲಾ ಅಂದುಕೊಳ್ತೀವಿ. ಆದರೆ ಅರಣ್ಯ ರಕ್ಷಕರಾಗಿ ಕೆಲಸ ಮಾಡುವ ಇವರು ಮಾಡಿರುವ ಸಾಧನೆ ಹುಬ್ಬೇರಿಸುವಂಥದ್ದು.
ಹೌದು. ತಾಂಜೇನಿಯಾ ದೇಶದಲ್ಲಿರುವ ಮೌಂಟ್ ಕಿಲಿಮಾಂಜರ್ ಪರ್ವತವನ್ನು ಹೊನ್ನಾಳಿಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅರಣ್ಯ ರಕ್ಷಕ ವಿಕ್ರಂ ಅವರು ಈ ಸಾಹಸ ಮಾಡಿ ಯಶಸ್ವಿಯಾಗಿದ್ದಾರೆ.
ಸುಮಾರು 12 ದಿನಗಳ ಕಾಲ ಚಾರಣ ಮಾಡಿದ್ದ ವಿಕ್ರಂ ಅವರ ಈ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ಯುವಕ ವಿಕ್ರಂಗೆ ಮೊದಲಿನಿಂದಲೂ ಚಾರಣ ಅಂದರೆ ತುಂಬಾನೇ ಪ್ರೀತಿ. ತಾಲೂಕಿಗೆ ಒಳ್ಳೆಯ ಹೆಸರು ತರಬೇಕು, ಏನನ್ನಾದರೂ ಸಾಧಿಸಬೇಕೆಂಬ ಹಠ ಇತ್ತು. ಈ ಹಿನ್ನೆಲೆಯಲ್ಲಿ ಸುಮಾರು 5895 ಮೀಟರ್ ಎತ್ತರದ ಪರ್ವತ ಏರಿ ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದಾರೆ. ಇದಕ್ಕೂ ಮುನ್ನ ವಿಕ್ರಂ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂತ್ ಬೆಟ್ಟ ಏರಿ ಗಮನ ಸೆಳೆದಿದ್ದರು. ವಿಕ್ರಂ ಸಾಹಸಕ್ಕೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದ್ದಾರೆ.
PublicNext
30/04/2022 03:29 pm