ದಾವಣಗೆರೆ: ಜಿಲ್ಲೆಯಲ್ಲಿ ಸದ್ಯಕ್ಕೆ ಶಾಂತವಾಗಿರುವ ವರುಣ ರಾತ್ರಿ ವೇಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರೀ ಗಾಳಿ ಹಾಗೂ ಮಳೆಗೆ ಅಲ್ಲಲ್ಲಿ ಮನೆಗಳು ಧರೆಗುರುಳುತ್ತಿವೆ. ಭಾರೀ ಮಳೆಯಿಂದಾಗಿ ಕ್ಷಣಾರ್ಧದಲ್ಲೇ ಮನೆ ಕುಸಿದು ಬಿದ್ದಿದ್ದು, ಪವಾಡ ಸದೃಶ್ಯವಾಗಿ ಘಟನೆಯಲ್ಲಿ ಮನೆಯಲ್ಲಿದ್ದ ಐವರು ಪಾರಾಗಿದ್ದಾರೆ.
ದಾವಣಗೆರೆ ತಾಲೂಕಿನ ಐಗೂರು ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗೊಲ್ಲರಹಟ್ಟಿಯ ಪಡಿತರ ಧಾನ್ಯ ವಿತರಕ ಸಿದ್ದಪ್ಪ ಎಂಬುವರ ಮನೆ ಕುಸಿದಿದ್ದು, ಸಿದ್ದಪ್ಪ ದಂಪತಿ,ಇಬ್ಬರು ಮಕ್ಕಳು ಹಾಗೂ ತಂದೆ ಮನೆಯಲ್ಲಿ ವಾಸವಿದ್ದರು.
ಮನೆಯಲ್ಲಿ ಐವರು ಕುಳಿತಿರುವಾಗ ನೋಡನೋಡುತ್ತಲೇ ಮನೆ ಕುಸಿದು ಬಿದ್ದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಮಣ್ಣಿನಲ್ಲಿ ಹೂತಿರುವ ಧವಸ,ಧಾನ್ಯ, ಬಟ್ಟೆ, ಇತರೆ ಸಾಮಗ್ರಿಗಳು ಹಾಳಾಗಿವೆ.
ದಾವಣಗೆರೆ ಜಿಲ್ಲೆಯಲ್ಲಿ ವಾರದಿಂದ ಭಾರೀ ಮಳೆ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ತಾಲೂಕಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
PublicNext
11/10/2021 04:10 pm