ದಾವಣಗೆರೆ: ಬೆಣ್ಣೆನಗರಿಯಲ್ಲಿ ವರುಣನ ಆರ್ಭಟ ಜನರು ಬೆಚ್ಚಿಬಿದ್ದಿದ್ದಾರೆ. ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಭಾರೀ ಹಾನಿ ಸಂಭವಿಸಿದೆ. ಅಲ್ಲಲ್ಲಿ ಮನೆ ಕುಸಿದು ಬಿದ್ದಿದ್ದರೆ ಮತ್ತೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹೊನ್ನಾಳಿಯ ಹಿರೇಕಲ್ಮಠ ಕೆರೆ ಭರ್ತಿಯಾಗಿದ್ದು, ಕೆರೆಗೆ ಮೀನು ಬಿಟ್ಟ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನ್ಯಾಮತಿ ತಾಲೂಕಿನ ದಾನಿಹಳ್ಳಿ ಬಳಿ ರಸ್ತೆ ಕೊಚ್ಚಿ ಹೋಗಿದ್ದು ಸೇತುವೆ ಸಹ ನೀರಿನಲ್ಲಿ ಮುಳುಗಿದೆ. ಹೊನ್ನಾಳಿ ಹಾಗೂ ನ್ಯಾಮತಿ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ರಸ್ತೆ ಕಡಿತ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ಓಡಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಕೂಡಲೇ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಭಾರಿ ಮಳೆಯಿಂದಾಗಿ ರಸ್ತೆಗಳು ಕೊಚ್ಚಿಹೋದರೆ, ವಿದ್ಯುತ್ ಕಂಬಗಳು ಧರೆಗುರುಳಿವೆ. ಮಳೆಯಿಂದಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದಿದ್ದು, ಶಾಲೆಯಲ್ಲಿದ್ದ ಆಹಾರ ಪದಾರ್ಥಗಳು ನೀರಿಗಾಹುತಿಯಾಗಿವೆ.
PublicNext
02/08/2022 07:36 pm