ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಜೋರಾಗಿ ಸುರಿದ ಮಳೆಯಿಂದಾಗಿ ಬುಧವಾರ ರಾತ್ರಿ ಜನಜೀವನ ಅಸ್ತವ್ಯಸ್ಥಗೊಂಡಿತು.
ತಡರಾತ್ರಿ ರಭಸದಿಂದ ಸುರಿದ ಮಳೆಯಿಂದಾಗಿ ಪುರಸಭೆ ವಾರ್ಡ್ ನಂ.8 ರಲ್ಲಿ ಭಾಗಶಃ ಮನೆ, ರಸ್ತೆಗಳು, ಪತ್ರಿಬಸವನಗರ 3 ನೇ ರಸ್ತೆಯಲ್ಲಿ 4 ಮನೆಗಳಿಗೆ ಮಳೆ ನೀರು ಹೊಕ್ಕು ಜಲಾವೃತಗೊಂಡವು.
ಮನೆಗಳಿಗೆ ನುಗ್ಗಿದ ಮಳೆ ನೀರಿನಿಂದಾಗಿ ನಾಗರಿಕರು ರಾತ್ರಿಯಿಡಿ ತೊಂದರೆಗೆ ಒಳಗಾಗಿದ್ದು, ಮಳೆ ನೀರಿನಲ್ಲಿಯೇ ಕಾಲ ಕಳೆದರು. ಮನೆಗಳಿಗೆ ನುಗ್ಗಿದ ಮಳೆ ನೀರು ತಗೆದು ಹಾಕಲು ಹರಸಾಹಸ ಪಟ್ಟರು. ನೀರು ಎಷ್ಟು ತಗೆದು ಹಾಕಿದರು ಪದೇ, ಪದೇ ಗಲೀಜು ಸಮೇತ ಮನೆಗಳಿಗೆ ನುಗ್ಗಿ ಬಂದಿತು.
ವಿಷಯ ತಿಳಿದು ವಾರ್ಡ್ ಸದಸ್ಯರು, ಜನ ಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಮನೆಯ ಗೃಹಪಯೋಗಿ ವಸ್ತುಗಳು, ಆಹಾರ ಸಾಮಗ್ರಿ, ಪಾತ್ರೆಗಳು ಮಳೆ ನೀರಲ್ಲಿ ತೇಲಿದವು. ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡಿದರು.
PublicNext
01/09/2022 03:03 pm