ದಾವಣಗೆರೆ: ಅದು ತಲೆತಲಾಂತರದಿಂದ ಇದ್ದ ಮುಖ್ಯ ರಸ್ತೆ. ಆದ್ರೆ, ಪಕ್ಕದಲ್ಲಿದ್ದ ಸೈಟ್ ಮಾಲೀಕ "ಈ ರಸ್ತೆ ಜಾಗ ನಂದು" ಎಂದು ರಾತೋರಾತ್ರಿ ಕಲ್ಲಿನ ಬೇಲಿ ನೆಟ್ಟಿದ್ದ. ಇದ್ರಿಂದ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಗರ್ಭಿಣಿಯರು, ರೋಗಿಗಳ ಸಹಿತ ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿತ್ತು. ಇದರಿಂದ ಬೇಸತ್ತ ಸ್ಥಳೀಯರು, ಕಲ್ಲಿನ ಕಂಬ ಪುಡಿ ಪುಡಿ ಮಾಡಿದ ಘಟನೆ ಹಳೆ ಕುಂದವಾಡ ಗ್ರಾಮದಲ್ಲಿ ನಡೆದಿದೆ.
ಜನರು, ಒತ್ತುವರಿದಾರನ ವಿರುದ್ಧ ಕೆಂಡಾಮಂಡಲರಾಗಿದ್ದು, ವಾದ- ವಿವಾದವೂ ನಡೆಯಿತು. ಸ್ಥಳಕ್ಕೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಹಬದಿಗೆ ತಂದರು. ನಗರದ ಹಳೆ ಕುಂದುವಾಡಕ್ಕೆ ಹೋಗುವ ಮುಖ್ಯರಸ್ತೆ ಮಳೆ ಬಂದರೆ ಜಲಾವೃತಗೊಳ್ಳುತ್ತಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಶುರು ಮಾಡಿತ್ತು. ಆಗ ಅಕ್ಕಪಕ್ಕದ ಸೈಟ್ ನವರು ರಸ್ತೆಯೇ ನಮ್ಮದು ಎಂದು ಕಿತಾಪತಿ ತೆಗೆದಿದ್ರು.
ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಶೋರೂಂ ಮಾಲೀಕ ರಸ್ತೆ ನಂದು ಎಂದು ರಾತೋರಾತ್ರಿಯೇ ಕಲ್ಲಿನ ಕಂಬ ನೆಟ್ಟು ಬಿಟ್ಟಿದ್ದ. ಇದರಿಂದ ಜನರು ರಸ್ತೆ ದಾಟಲು ಪೇಚಾಡಿದರು. ಬಳಿಕ ಜನರ ತಾಳ್ಮೆಯ ಕಟ್ಟೆಯೂ ಹೊಡೆಯಿತು. ಇನ್ನು, ಸೈಟ್ ಮಾಲೀಕ ಈ ಜಾಗ ನಂದು, ರಸ್ತೆಯನ್ನು ಮಧ್ಯದಿಂದ ಮಾಡಿ ಎಂದು ವಾದ ಮಾಡಿದ್ರೆ, ಆ ಜಾಗ ಒತ್ತುವರಿ ಮಾಡಲಾಗಿದೆ. ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹೇಳಿದ್ದಾರೆ. ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿ ಗ್ರಾಮಸ್ಥರ ಸಮ್ಮುಖದಲ್ಲೇ ಕೆಲಸ ಆರಂಭಿಸಿದರು.
PublicNext
28/06/2022 01:36 pm