ದಾವಣಗೆರೆ: ಆ ಯುವತಿ ಶಪಥ ಮಾಡಿದ್ದಾಳೆ. ತನ್ನೂರಿನ ರಸ್ತೆ ಡಾಂಬರೀಕರಣ ಆಗಬೇಕು. ಆ ಬಳಿಕವೇ ಮದುವೆ. ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮದ ಬಿಂದು ಎಂಬಾಕೆಯೇ ಈ ನಿರ್ಧಾರ ತೆಗೆದುಕೊಂಡಿರುವುದು. ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ, ಯುವತಿಯರನ್ನು ಮದುವೆಯಾಗಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಈ ಗ್ರಾಮದ ಹಾಳಾಗಿರುವ ರಸ್ತೆ.
ಇದು ದಾವಣಗೆರೆ ಜಿಲ್ಲೆ ಮಾಯಕೊಂಡ ಸಮೀಪದ ಹುಬ್ಳಿ ಪಕ್ಕದಲ್ಲಿರೋ ಎಚ್ ರಾಂಪುರ ಗ್ರಾಮದ ಜನರ ಗೋಳಿನ ಪರಿ. ಈ ಗ್ರಾಮದಲ್ಲಿ ಸುಮಾರು 40 ರಿಂದ 50 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮ ಗುಡ್ಡಗಾಡಿನ ಮಧ್ಯೆ ಇದೆ. ಜಿಲ್ಲೆಯ ಗಡಿ ಗ್ರಾಮ ಆಗಿರೋ ಹೆಚ್. ರಾಂಪುರಕ್ಕೆ ಸರಿಯಾದ ರಸ್ತೆಯೇ ಇಲ್ಲ. ರಸ್ತೆ ಇಲ್ಲದೆ ಇರೋ ಕಾರಣಕ್ಕೆ ಈ ಊರಿಗೆ ಬಸ್ ಕೂಡ ಬರೋದಿಲ್ಲ. ಇದರಿಂದ ಇಲ್ಲಿಯ ಮಕ್ಕಳು ಶಾಲೆಗೆ ಕೂಡ ಹೋಗೊಕೆ ಆಗ್ತಿಲ್ಲ. ಅಲ್ಲದೆ ಗಡಿ ಗ್ರಾಮ ಆಗಿರೋದ್ರಿಂದ ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲ. ಸುತ್ತಮುತ್ತ ಕಾಡು ಇರುವುದರಿಂದ ಪ್ರಾಣಿಗಳ ಉಪಟಳವೂ ಜಾಸ್ತಿ ಇದೆ. ಮಕ್ಕಳು ನಡೆದುಕೊಂಡು ಮಾಯಕೊಂಡ ಶಾಲೆಗೆ ಹೋಗಬೇಕು. ಇದರಿಂದ ಕೆಲ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿಲ್ಲ. ಬಸ್ ಬರೋಲ್ಲ ಎಂಬ ಕಾರಣಕ್ಕೆ ಇಲ್ಲಿನ ಯುವಕರನ್ನು ಮತ್ತು ಯುವತಿಯರನ್ನ ಮದುವೆಯಾಗೋಕು ಯಾರೂ ಒಪ್ಪುತ್ತಿಲ್ಲ. ಇದನ್ನ ಗಮನಿಸಿ ಎಚ್ ರಾಂಪುರ ಗ್ರಾಮದ ಬಿಂದು ಎಂಬ ಯುವತಿಯೊಬ್ಬಳು ತಮ್ಮೂರಿಗೆ ರಸ್ತೆಯಾಗಿ ಬಸ್ ಬರೋವರೆಗೂ ಮದುವೆ ಆಗಲ್ಲ ಎಂದು ಶಪಥ ಮಾಡಿದ್ದಾಳೆ.
ಇನ್ನು ಈ ಯುವತಿ ಸಿಎಂ ಹಾಗೂ ಪಿಎಂಗೂ ಪತ್ರ ಬರೆದಿದ್ದಾಳೆ. ಬಸವರಾಜ್ ಬೊಮ್ಮಾಯಿ ಇದಕ್ಕೆ ಸ್ಪಂದಿಸಿದ್ದಾರೆ.
PublicNext
15/09/2021 06:18 pm