ಚಿತ್ರದುರ್ಗ : ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶ, ಭೌತಿಕ ಸುಧಾರಣೆ ಅನಿವಾರ್ಯದ ದೃಷ್ಟಿಯಿಂದ ತಾನು ಬೋಧಿಸುವ ಕೊಠಡಿಯನ್ನು ದತ್ತು ಪಡೆದುಕೊಂಡಿದ್ದಾರೆ ಈ ಶಿಕ್ಷಕ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಹೊಸ ವಿನ್ಯಾಸ ನೀಡುವ ಮೂಲಕ ಇಡೀ ಶಾಲೆಯನ್ನೇ ಸಂಪೂರ್ಣವಾಗಿ ಪರಿವರ್ತಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಇಂಗ್ಲಿಷ್ ಶಿಕ್ಷಕ ಸಿ.ಎನ್. ನಾಗಭೂಷಣ್ ಇವರೇ ಶಾಲೆಗೆ ಹೊಸ ಸ್ಪರ್ಶ ನೀಡಿರುವುದು.
ಅಂಬಲಗೆರೆ ಗ್ರಾಮದಲ್ಲಿ 1937 ರಲ್ಲಿ ಆರಂಭಗೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿ ಇದಾಗಿತ್ತು. ಸಿ.ಎನ್. ನಾಗಭೂಷಣ್ ಅವರು ಕಳೆದ ಆರು ತಿಂಗಳಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿ " ನೋಡ ಬನ್ನಿ ನಮ್ಮೂರ ಶಾಲೆಯ ಅಂದವ" ಎಂಬುವಂತೆ ಪರಿವರ್ತನೆ ಮಾಡಿದ್ದಾರೆ.
ಶಾಲೆಯ ಶಿಥಿಲ ವ್ಯವಸ್ಥೆಯನ್ನು ಕಂಡ ಮೇಷ್ಟ್ರು ಆರು ತಿಂಗಳ ಹಿಂದೆ ಒಂದು ಶಾಲಾ ಕೊಠಡಿಯನ್ನು ದತ್ತು ಪಡೆದುಕೊಂಡು ಮೂರು ಲಕ್ಷ ಖರ್ಚು ಮಾಡಿ ಸುಸಜ್ಜಿತವಾದ ಡೆಸ್ಕುಗಳು, ಕಂಪ್ಯೂಟರ್, ಎಲ್ಇಡಿ ಟಿವಿ, ಗೋಡೆಯ ಮೇಲೆ ಕಲಿಕೆಯ ಚರ್ಟ್ ಗಳು, ಪ್ರಾಣಿ ಪಕ್ಷಿಗಳ ಚಿತ್ರಣಗಳು, ರಾಷ್ಟ್ರ ನಾಯಕರ ಚಿತ್ರಣ ನೋಡುಗರನ್ನು ಕಣ್ಮನ ಸೆಳೆಯುತ್ತವೆ. ಮಾಡಲಾಗಿದೆ.
ಶಿಕ್ಷಕ ಸಿ.ಎನ್ ನಾಗಭೂಷಣ್ ಅವರು ಬಹುಮುಖ ಪ್ರತಿಭೆಯ ಶಿಕ್ಷಕರಾಗಿದ್ದು, ಇವರಿಗೆ ಬರುವ ಸಂಬಳದಲ್ಲಿ ಬಹುತೇಕ ಪಾಲನ್ನು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಮೀಸಲಿಟ್ಟಿದ್ದಾರೆ. ಏಕೆಂದರೆ " ಕಲಿಸದೆ ಎಣಿಸುವ ಸಂಬಳ ನನ್ನದಲ್ಲ" ಎನ್ನುವ ಧ್ಯೇಯವನ್ನು ರೂಢಿಸಿಕೊಂಡಿದ್ದಾರೆ. ಅಂಬಲಗೆರೆ ಸರ್ಕಾರಿ ಶಾಲೆಗೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಭೇಟಿ ನೀಡಿ, ಶಿಕ್ಷಕನನ್ನು ಸನ್ಮಾನಿಸಿದ್ದಾರೆ.
ಒಟ್ಟಾರೆಯಾಗಿ ಶಿಕ್ಷಕನೊಬ್ಬ ಮೂರು ಲಕ್ಷ ಸ್ವಂತ ಹಣ ಖರ್ಚು ಮಾಡುವುದರ ಜೊತೆಗೆ ದಾನಿಗಳ ಸಹಾಯದಿಂದ ಇಡೀ ಶಾಲೆಯನ್ನೇ ದತ್ತು ಪಡೆದು ಮಕ್ಕಳ ಸರ್ವತೋಮುಖ ಕಲಿಕೆಗೆ ಸಾಕ್ಷಿಯಾಗಿರುವುದು ಕಾಣಬಹುದು. ಇದೇ ಮಾದರಿಯಲ್ಲಿ ರಾಜ್ಯದಲ್ಲಿರುವ ಇನ್ನಿತರೆ ಮತ್ತಷ್ಟು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ ಎಂಬುದು ನಮ್ಮ ಆಶಯವಾಗಿದೆ.
PublicNext
05/09/2021 11:55 am