ಕನಕಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ಹಾರೋಹಳ್ಳಿ ಕನಕಪುರ 209 ರಾಷ್ಟ್ರೀಯ ಹೆದ್ದಾರಿ ಗುಂಡಿಮಯವಾಗಿದ್ದು, ಜೊತೆಗೆ ಬೆಂಗಳೂರು ಮೈಸೂರು ದಶಪಥ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಮೈಸೂರು ಕಡೆಗೆ ಹೋಗಬೇಕಾದ ವಾಹನಗಳು ಹಾರೋಹಳ್ಳಿ ಕನಕಪುರ ಮಾರ್ಗವಾಗಿ ಸಾಗುತ್ತಿವೆ. ಈ ಸಂದರ್ಭದಲ್ಲಿ ಗುಂಡಿಮಯವಾಗಿರುವ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಾಧ್ಯವಾಗದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೊತೆಗೆ ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದರು.
ಈ ವೇಳೆ ಕಗ್ಗಲೀಪುರ ಪೊಲೀಸರು ತಾವೇ ಮುಂದೆ ನಿಂತು ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಾರಂಭಿಸಿದರು. ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಾದ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಕಗ್ಗಲೀಪುರ ಇನ್ಸ್‌ಪೆಕ್ಟರ್ ರಾಮಪ್ಪ ಬಿ ಗುತ್ತೇರ್ ನೇತೃತ್ವದ ತಂಡವು ಕೇವಲ ರಕ್ಷಣೆಯೊಂದೇ ಅಲ್ಲ ಸಾರ್ವಜನಿಕರ ಯಾವುದೇ ಕೆಲಸಕ್ಕೂ ಪೊಲೀಸರು ಸೈ ಎಂದು ಜಲ್ಲಿ ಮಣ್ಣು ತಂದು ಗುಂಡಿ ಮುಚ್ಚುವ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.
ರಸ್ತೆ ಗುಂಡಿ ಮುಚ್ಚಿ ಒಳ್ಳೆಯ ಕೆಲಸ ಮಾಡಿರುವ ಪೊಲೀಸರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಕೆಲಸದಲ್ಲಿ ಕಗ್ಗಲೀಪುರ ಠಾಣೆಯ ಸಿಬ್ಬಂದಿಯಾದ ಪಿಎಸ್‌ಐ ದುರ್ಗಪ್ಪ, ಮಡಿಯಪ್ಪ, ಶಿವರಾಜ್ ತೇಲಿ, ಸುರೇಶ್ ಕಟ್ಟಿಮನಿ, ಗಿರೀಶ್, ರವಿ ಇತರರು ಸಾಥ್ ನೀಡಿದರು.
PublicNext
28/08/2022 08:33 pm