ದಾವಣಗೆರೆ: ಗ್ರಾಮೀಣ ಪ್ರದೇಶದ ಒಂದು ಸಣ್ಣ ಮನೆಗೆ ಎಷ್ಟು ವಿದ್ಯುತ್ ಬಿಲ್ ಬರಬಹುದು. ಅಬ್ಬಬ್ಬಾ ಅಂದರೆ 500ರೂಪಾಯಿ ಆಗಬಹುದು. ಆದ್ರೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ನೀಡುವ ಮೂಲಕ ವಿದ್ಯುತ್ ಬಳಕೆದಾರರಿಗೆ ಬೆಸ್ಕಾಂ ಶಾಕ್ ನೀಡಿದೆ. ಅಲ್ಲದೇ, ಬಿಲ್ ಕಟ್ಟದಿದ್ದರೆ ಸಂಪರ್ಕ ಕಟ್ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದ್ದು, ಬೆಸ್ಕಾಂ ಯಡವಟ್ಟಿಗೆ ಜನ ಕಂಗಾಲಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಬೆಸ್ಕಾಂ ಸಿಬ್ಬಂದಿ ಮಾಡಿರುವ ಪ್ರಮಾದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಒಂದು ಮನೆಯ ವಿದ್ಯುತ್ ಬಿಲ್ 1.48 ಲಕ್ಷ ರೂಪಾಯಿ, ಮತ್ತೊಂದು 80 ಸಾವಿರ, 72 ಸಾವಿರ ಹೀಗೆ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ಜನರಿಗೆ ಸುಧಾರಿಸಿಕೊಳ್ಳಲಾಗದ ಶಾಕ್ ನೀಡಿದೆ.
ಇನ್ನು ವಿದ್ಯುತ್ ಬಿಲ್ ಕಂಡ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಬಿಲ್ ನೀಡಿದ ಬೆಸ್ಕಾಂ ಸಿಬ್ಬಂದಿ ಇದನ್ನ ಕಟ್ಟಬೇಕು, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡುತ್ತೇವೆ ಎಂದು ಸ್ಥಳದಲ್ಲೇ ವಿದ್ಯುತ್ ಸಂಪರ್ಕವನ್ನ ಕಡಿತ ಮಾಡಿದ್ದಾರೆ. ನಾವು ಇಷ್ಟೊಂದು ಹಣ ಕಟ್ಟುವುದಿಲ್ಲ ಎಂದು ಜನ ಪಟ್ಟುಹಿಡಿದಿದ್ದಾರೆ. ಅಧಿಕಾರಿ ಮತ್ತು ಜನರ ನಡುವಿನ ಈ ಹಗ್ಗಾಜಗ್ಗಾಟ ಎಲ್ಲಿಗೆ ಹೋಗಿ ತಲುಪುತ್ತದೆಯೂ ಕಾದು ನೋಡಬೇಕಿದೆ.
PublicNext
24/06/2022 08:28 am