ಪಣಜಿ: ಗೋವಾ ಗಡಿ ಭಾಗದ ಕರ್ನಾಟಕದ ಜನರು ರಜಾ ದಿನಗಳಲ್ಲಿ ಗೋವಾಗೆ ಪ್ರವಾಸ ಕೈಗೊಳ್ಳುತ್ತಾರೆ. ಹೀಗೆ ಕಳೆದ ವಾರ ಗುರುವಾರದಿಂದ ನಾಲ್ಕು ದಿನ ರಜೆ ಇತ್ತು. ಕರ್ನಾಟಕದ ಗಡಿ ಜಿಲ್ಲೆಗಳ ಜನರು ರಜಾದಿನ ಕಳೆಯಲು ಗೋವಾದತ್ತ ಹೊರಟಿದ್ದರು. ಆದರೆ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ಶಾಕ್ ಎದುರಾಗಿತ್ತು.
ಸಾಮಾನ್ಯವಾಗಿ ಗೋವಾ ಪ್ರವೇಶಿಸಲು ವಿಶೇಷ ಪರವಾನಗಿ ಪಡೆಯಬೇಕು. ಇದಕ್ಕೆ 100 ರೂ.ಗಳಿಂದ 200 ರೂ. ವೆಚ್ಚವಾಗುತ್ತದೆ. ಈ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ಆರ್‌ಟಿಒ ಮತ್ತು ರಾಜ್ಯದ ಇತರೆ ಭಾಗಗಳಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಪಾವತಿಸಬೇಕು. ಗುರುವಾರದಿಂದ ನಾಲ್ಕು ದಿನ ರಜೆ ಹಿನ್ನೆಲೆ ಆರ್‌ಟಿಒ ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆನ್‌ಲೈನ್‌ನಲ್ಲಿಯೂ ವಿಶೇಷ ಪರವಾನಿಗೆ ಪಡೆಯುವ ವ್ಯವಸ್ಥೆಯೂ ಇಲ್ಲ. ಹೀಗಾಗಿ ವಿಶೇಷ ಪರವಾನಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಮೊದಲು ಚೆಕ್ ಪೋಸ್ಟ್ ಗಳಲ್ಲಿ ಪರವಾನಿಗೆ ಪಡೆಯುವ ವ್ಯವಸ್ಥೆ ಇತ್ತು. ಆದ್ರೆ ಏಪ್ರಿಲ್ 1ರಿಂದ ಈ ಸೇವೆ ಸ್ಥಗಿತಗೊಳಿಸಲಾಗಿದೆ. ನೆರೆಯ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಆನ್ ಲೈನ್ ನಲ್ಲಿಯೇ ಪರವನಾಗಿ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬಂದಿಲ್ಲ.
ಪರಿಣಾಮ ಗೋವಾದ ಮೊಲ್ಲೆಮ್ ಚೆಕ್ ಪೋಸ್ಟ್‌ನಲ್ಲಿ ಕರ್ನಾಟಕದ 40 ಟ್ಯಾಕ್ಸಿಗಳನ್ನು ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ ರವಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಾರಿಗೆ ಆಯುಕ್ತ ಶಿವಕುಮಾರ್ ಎನ್, ಆನ್‌ಲೈನ್‌ನಲ್ಲಿ ವಿಶೇಷ ಪರವಾನಿಗೆ ನೀಡಲು ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ಚೆಕ್ ಪೋಸ್ಟ್‌ಗಳಲ್ಲಿಯೂ ವಿಶೇಷ ಪರವಾನಿಗೆ ವಿತರಿಸುವ ವ್ಯವಸ್ಥೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
PublicNext
20/04/2022 03:57 pm