ಬೆಂಗಳೂರು: ರಸ್ತೆ ಅಗೆದ ಸಂಸ್ತೆಯೇ ವಾಪಸ್ ರಿಪೇರಿ ಕಾರ್ಯ ಮಾಡಿಸಬೇಕು ಎಂದು ಬಿಬಿಎಂಪಿ ಆದೇಶ ನೀಡಿದೆ. ಇದಕ್ಕೂ ಮುಂಚೆ ರಸ್ತೆ ಅಗೆಯುವಾಗ ಬಿಬಿಎಂಪಿ ಅನುಮತಿ ಪಡೆಯದೇ ಇದ್ದಲ್ಲಿ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಿತ್ತು.
ಸೋಮವಾರ ಈ ನೂತನ ಆದೇಶ ಜಾರಿಗೆ ಬಂದಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅನುಸಾಧನ ಅಳವಡಿಕೆ ಅಥವಾ ದುರಸ್ತಿಗಾಗಿ ರಸ್ತೆ ಅಗೆಯುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೇ ಅಗೆದ ರಸ್ತೆಯನ್ನು ಮುಚ್ಚಬೇಕಿದೆ. ರಸ್ತೆ ಅಗೆಯಲು ಅನುಮತಿ ಪಡೆಯುವ ಸಂದರ್ಭದಲ್ಲಿ ಓರ್ವ ಸಿವಿಲ್ ಎಂಜಿನಿಯರ್ ಮೂಲಕ ರಸ್ತೆ ಅಗೆತ ಮತ್ತು ಪುನಶ್ಚೇತನದ ನಕ್ಷೆ ಸಿದ್ಧಪಡಿಸಿ ಸಲ್ಲಿಸಬೇಕಿದೆ.
ಬೆಸ್ಕಾಂ, ಜಲಮಂಡಳಿ, ಕೆಪಿಟಿಸಿಎಲ್ ಸೇರಿದಂತೆ ಹಲವು ಸಂಸ್ಥೆಗಳು ವಿವಿಧ ಕಾರಣಕ್ಕಾಗಿ ರಸ್ತೆ ಅಗೆದು ಕೆಲಸ ಮುಗಿದ ಕೂಡಲೇ ದುರಸ್ತಿಗೊಳಿಸದೆ ಬಿಟ್ಟು ಹೋಗುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಸಾವು, ನೋವಿಗೂ ಕಾರಣವಾಗಿತ್ತು. ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಬಿಬಿಎಂಪಿ ಛೀಮಾರಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಸೇರಿದಂತೆ ಇತರೆ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆದಿತ್ತು. ಸಭೆಯಲ್ಲಿ ರಸ್ತೆ ಅಗೆಯುವ ಸಂಸ್ಥೆಗಳೇ ಅದನ್ನು ದುರಸ್ತಿಗೊಳಿಸಬೇಕೆಂಬ ಸೂಚನೆ ಮೇರೆಗೆ ಹೊಸ ಆದೇಶ ಹೊರಡಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
PublicNext
19/04/2022 11:57 am