ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಶೈಕ್ಷಣಿಕ ಕ್ಯಾಂಪಸ್ ಧಾರವಾಡದಲ್ಲಿ ಸಜ್ಜುಗೊಂಡಿದ್ದು ಏಪ್ರಿಲ್ ತಿಂಗಳಲ್ಲಿ ಕ್ಯಾಂಪಸ್ ಉದ್ಘಾಟನೆಯಾಗಲಿದೆ. ಈ ಸಂಬಂಧ ಮಂಗಳವಾರ ಕ್ಯಾಂಪಸ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಐಐಐಟಿ ಕಟ್ಟಡ ಹಾಗೂ ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಧಾರವಾಡ ತಾಲೂಕಿನ ತಡಸಿನಕೊಪ್ಪ ಬಳಿಯ ಸುಮಾರು 60 ಎಕರೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರಮೇಶನ್ ಟೆಕ್ನಾಲಜಿ) ಕಾಯಂ ಕ್ಯಾಂಪಸ್ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು, ಈಗಾಗಲೇ 834 ಜನ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಕಟ್ಟಡ ಉದ್ಘಾಟಿಸಲಾಗುವುದು. ಸಾಧ್ಯವಾದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಸ್ಥಳಕ್ಕೆ ಕರೆಯಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಜೋಶಿ ತಿಳಿಸಿದರು.
ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಗತಿಕಮಟ್ಟದ ಸಂಸ್ಥೆಯನ್ನಾಗಿಸುವ ಪ್ರಮುಖ ಉದ್ದೇಶದೊಂದಿಗೆ ಭಾರತ ಸರ್ಕಾರ 2015ರಲ್ಲಿ ಧಾರವಾಡಕ್ಕೆ ಐಐಐಟಿ ಮಂಜೂರು ಮಾಡಿತ್ತು. ಅದೇ ವರ್ಷ ಹುಬ್ಬಳ್ಳಿಯ ಐಟಿ ಪಾರ್ಕಿನ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿತ್ತು. ಈಗಾಗಲೇ ಆರು ಬ್ಯಾಚ್‌ಗಳು ಇಲ್ಲಿಂದ ಪದವಿ ಪಡೆದುಕೊಂಡಿವೆ.
ಒಟ್ಟು 4 ಸಾವಿರ ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಯಲು ಅನುಕೂಲ ಕಲ್ಪಿಸುವಷ್ಟು ದೊಡ್ಡ ಕ್ಯಾಂಪಸ್ ಇದಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಬಹುದಾಗಿದೆ.
PublicNext
16/02/2022 10:22 am