ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ ಮತ್ತಷ್ಟು ಚುರುಕುಗೊಂಡಿದ್ದು, ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಪ್ರವೇಶಿಸಿದ್ದ ಊರ್ಜಾ ಎಂಬ ಟನಲ್ ಬೋರಿಂಗ್ ಮಷಿನ್ (ಸುರಂಗ ಕೊರೆಯುವ ಯಂತ್ರ) ಬರೋಬ್ಬರಿ 13 ತಿಂಗಳ ನಂತರ ಹೊರಬಂದಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು, 855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. 2020ರ ಆಗಸ್ಟ್ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. 13 ತಿಂಗಳ ಬಳಿಕ ಇಂದು (ಸೆ.22) ಊರ್ಜಾ ಯಂತ್ರ ಹೊರಬಂದಿದೆ. ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದ್ದಾರೆ.
ಮೆಟ್ರೋ ಫೇಸ್ 2ರಲ್ಲಿ, ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಸುಮಾರು 13 ಕಿ.ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕಾಗಿ 9 ಟಿಬಿಮ್ (ಟನಲ್ ಬೋರಿಂಗ್ ಮಿಷನ್)ಗಳು ಕೆಲಸ ನಿರ್ವಹಿಸುತ್ತಿವೆ. ಈ 9 ಮಿಷನ್‌ಗಳ ಪೈಕಿ ಊರ್ಜಾ ಸುರಂಗ ಮಾರ್ಗ ಕೆಲಸ ಮುಗಿಸಿ ಹೊರ ಬರುತ್ತಿರುವ ಮೊದಲ ಯಂತ್ರವಾಗಿದೆ.
PublicNext
22/09/2021 12:42 pm