ಏರ್ ಇಂಡಿಯಾ, ಎಮಿರೇಟ್ಸ್, ಜಪಾನ್ ಏರ್‌ಲೈನ್ಸ್ ಮತ್ತು ಇತರ ಏರ್‌ಲೈನ್ ಕಂಪನಿಗಳು AT&T ಮತ್ತು Verizon ಕಂಪನಿಗಳಿಂದ 5G ಸೇವೆ ಆರಂಭಿಸಿದ ಬೆನ್ನಲ್ಲೇ USಗೆ ವಿಮಾನಗಳನ್ನು ರದ್ದುಗೊಳಿಸಿವೆ. ಸ್ಯಾನ್ ಫ್ರಾನ್ಸಿಸ್ಕೋ, ಡಲ್ಲಾಸ್ ಫೋರ್ಟ್ ವರ್ತ್, ಒರ್ಲ್ಯಾಂಡೊ, ಸಿಯಾಟಲ್, ಮಿಯಾಮಿ, ನೆವಾರ್ಕ್, ಹೂಸ್ಟನ್, ಚಿಕಾಗೋ ಮತ್ತು ಬೋಸ್ಟನ್ ಸೇರಿದಂತೆ ಕೆಲವು ಜನಪ್ರಿಯ ಯುಎಸ್ ನಗರಗಳಿಗೆ ವಿಮಾನಗಳು ರದ್ದು ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೂ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
"ಯುಎಸ್‌ಎಯಲ್ಲಿ 5ಜಿ ಸಂವಹನಗಳ ನಿಯೋಜನೆಯಿಂದಾಗಿ, ಭಾರತದಿಂದ ಯುಎಸ್‌ಎಗೆ ನಮ್ಮ ಕಾರ್ಯಾಚರಣೆಗಳನ್ನು 19 ಜನವರಿ 2022 ರಿಂದ ವಿಮಾನದ ಪ್ರಕಾರದಲ್ಲಿ ಬದಲಾವಣೆಯೊಂದಿಗೆ ಮೊಟಕುಗೊಳಿಸಲಾಗಿದೆ/ಪರಿಷ್ಕರಿಸಲಾಗಿದೆ" ಎಂದು ಏರ್ ಇಂಡಿಯಾ ಟ್ವೀಟ್ ಮೂಲಕ ತಿಳಿಸಿದೆ.
ವೇಳಾಪಟ್ಟಿಯ ಬದಲಾವಣೆ: ಎಮಿರೇಟ್ಸ್ ಇದೇ ರೀತಿಯ ಟ್ವೀಟ್ ಮೂಲಕ ವೇಳಾಪಟ್ಟಿಯ ಬದಲಾವಣೆಯ ಬಗ್ಗೆ ಫ್ಲೈಯರ್‌ಗಳಿಗೆ ಮಾಹಿತಿ ನೀಡಿದೆ. ಕಂಪನಿಯು "ಮುಂದಿನ ಸೂಚನೆ ಬರುವವರೆಗೆ 19 ಜನವರಿ 2022 ರಿಂದ ಕೆಳಗಿನ ಯುಎಸ್ ನಗರಗಳಿಗೆ ವಿಮಾನಗಳನ್ನು ಸ್ಥಗಿತಗೊಳಿಸುತ್ತಿದೆ" ಎಂದು ಘೋಷಿಸಿದೆ. ಬೋಸ್ಟನ್, ಚಿಕಾಗೋ, ಡಲ್ಲಾಸ್-ಫೋರ್ಟ್ ವರ್ತ್, ಹೂಸ್ಟನ್, ಮಿಯಾಮಿ, ನೆವಾರ್ಕ್, ಒರ್ಲ್ಯಾಂಡೊ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಯಾಟಲ್‌ಗೆ ಎಮಿರೇಟ್ಸ್ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಆದಾಗ್ಯೂ, JFK, LAX ಮತ್ತು Washington DCಗೆ ವಿಮಾನಗಳು ಎಂದಿನಂತೆ ಮುಂದುವರಿಯುತ್ತವೆ ಎಂದು ಎಮಿರೇಟ್ಸ್ ತಿಳಿಸಿದೆ.
ಜಪಾನ್ ಏರ್ಲೈನ್ಸ್ ಕೂಡ ಯುನೈಟೆಡ್ ಸ್ಟೇಟ್ಸ್ಗೆ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. 5G ರೋಲ್‌ಔಟ್ ಬೋಯಿಂಗ್ 777 ನಲ್ಲಿ ಸ್ಥಾಪಿಸಲಾದ ರೇಡಿಯೊ ತರಂಗ ಅಲ್ಟಿಮೀಟರ್‌ಗೆ ಅಡ್ಡಿಪಡಿಸುತ್ತದೆ ಎಂದು ಕಂಪನಿ ಹೇಳಿದೆ. ಆದ್ದರಿಂದ, ಅದು ಯುಎಸ್‌ಗೆ ತನ್ನ ವಿಮಾನಗಳನ್ನು ರದ್ದುಗೊಳಿಸುತ್ತಿದೆ.
ಮುಂಬರುವ ಅಪಾಯಗಳ ಬಗ್ಗೆ ಎಚ್ಚರಿಕೆ: ಈ ಹಿಂದೆ, ಅಮೇರಿಕನ್ ಏರ್‌ಲೈನ್ಸ್, ಡೆಲ್ಟಾ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಮತ್ತು ಸೌತ್‌ವೆಸ್ಟ್ ಏರ್‌ಲೈನ್ಸ್ ಸೇರಿದಂತೆ ಪ್ರಮುಖ ಯುಎಸ್ ಏರ್‌ಲೈನ್‌ಗಳ ಸಿಇಒ 5G ರೋಲ್‌ಔಟ್‌ನ ಮುಂಬರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಹೊಸ 5G ಸ್ಪೆಕ್ಟ್ರಮ್‌ನ ನಿಯೋಜನೆಯು ದೇಶಾದ್ಯಂತ ಕಾರ್ಯನಿರ್ವಹಿಸುವ ವಿಮಾನಗಳಿಗೆ ಅಡ್ಡಿ ಉಂಟುಮಾಡುತ್ತದೆ ಎಂದು CEO ಗಳು ಹೇಳಿದ್ದರು.
ವಿಮಾನ ನಿಲ್ದಾಣಗಳ ಸಮೀಪ ಸೇವೆ ವಿಳಂಬ: 5G ರೋಲ್‌ಔಟ್‌ನಿಂದಾಗಿ ವಾಣಿಜ್ಯ ಮತ್ತು ಸರಕು ವಿಮಾನಗಳ ಮೇಲೆ ಪರಿಣಾಮ ಬೀರಲಿದೆ ಎಂದು ರಾಯಿಟರ್ಸ್ ಪಡೆದಿರುವ ಸಿಇಒಗಳ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಈಗ AT&T ಮತ್ತು Verizon, ವಿಮಾನ ನಿಲ್ದಾಣಗಳ ಸಮೀಪವಿರುವ ಪ್ರದೇಶಗಳಲ್ಲಿ 5G ಸೇವೆಯನ್ನು ಭಾಗಶಃ ವಿಳಂಬಗೊಳಿಸಿದೆ. AT&T ಅದರ ವಿಳಂಬವು ತಾತ್ಕಾಲಿಕವಾಗಿದೆ ಮತ್ತು ಅದು ಸ್ವಯಂಪ್ರೇರಿತವಾಗಿದೆ ಎಂದು ಹೇಳಿದೆ. ಟೆಲಿಕಾಂ ಕಂಪನಿಯು ಪ್ರಸ್ತುತ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೊಂದಿಗೆ ಕೆಲಸ ಮಾಡುತ್ತಿದೆ.
"ನಮ್ಮ 5G ನಿಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದ್ದರೂ ಎರಡು ವರ್ಷಗಳಲ್ಲಿ ವಿಮಾನಯಾನ ಕಂಪನಿಗಳು ಸರಿಯಾಗಿ ಯೋಜನೆ ಮಾಡಿಲ್ಲ." ಎಂದು AT&T ಆರೋಪಿಸಿದೆ."ಈ ಸೀಮಿತ ಸಂಖ್ಯೆಯ ಟವರ್‌ಗಳನ್ನು ತಾತ್ಕಾಲಿಕವಾಗಿ ಹೊರತುಪಡಿಸಿ ನಾವು ಯೋಜಿಸಿದಂತೆ ಬೇರೆಡೆ ನಮ್ಮ ಸುಧಾರಿತ 5G ಸೇವೆಗಳನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಟೆಲಿಕಾಂ ಕಂಪನಿ ತಿಳಿಸಿದೆ ಎಂದು AFP ವರದಿ ಮಾಡಿದೆ . Verizon ಕೂಡ ತನ್ನ 5G ನೆಟ್‌ವರ್ಕ್ ಅನ್ನು ವಿಮಾನ ನಿಲ್ದಾಣಗಳ ಸುತ್ತಲೂ ಮಿತಿಗೊಳಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದೆ ಎಂದು ತಿಳಸಿದೆ.
ಕೃಪೆ: ಸುವರ್ಣ ನ್ಯೂಸ್
PublicNext
19/01/2022 04:45 pm