ನವದೆಹಲಿ: 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ಶ್ರೀಲಂಕಾ ಇದೀಗ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಹೋಗಿದೆ. ತೈಲವನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಾಗಿರುವುದರಿಂದ ಶ್ರೀಲಂಕಾದಲ್ಲಿ ತೈಲದರ ಮತ್ತೆ ಶೇ.20ರಷ್ಟು ಏರಿಕೆಯಾಗಿದೆ. ಪರಿಣಾಮ ದ್ವೀಪರಾಷ್ಟ್ರದಲ್ಲಿ ಇದೀಗ ಲೀಟರ್ ಪೆಟ್ರೋಲ್ ಬೆಲೆ 303 ರೂ.ಗೆ ಏರಿಕೆಯಾಗಿದೆ.
ಶ್ರೀಲಂಕಾದ ತೈಲ ಮಾರುಕಟ್ಟೆಯ 3ನೇ ಒಂದು ಭಾಗದಷ್ಟು ತೈಲ ಪೂರೈಸುವ ಶ್ರೀಲಂಕಾ ಐಒಸಿ 1 ಲೀಟರ್ ಪೆಟ್ರೋಲ್ ದರವನ್ನು 49 ರೂ.ನಷ್ಟು ಹೆಚ್ಚಿಸಿದ್ದು, 303 ರೂ.ಗೆ ತಲುಪಿದೆ. ಕಳೆದ 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ ಮಾಡಿದಂತಾಗಿದೆ. ಶ್ರೀಲಂಕಾದ ಕರೆನ್ಸಿಯಾದ ರೂಪಾಯಿ ಈ ತಿಂಗಳಿನಲ್ಲಿ ಅಮೆರಿಕನ್ ಡಾಲರ್ ಹಾಗೂ ಇತರ ಪ್ರಮುಖ ಕರೆನ್ಸಿಗಳ ಎದುರು ಶೇ.30ರಷ್ಟು ಅಪಮೌಲ್ಯಗೊಂಡಿದೆ. ಹೀಗಾಗಿ ತೈಲ ದರ ಏರಿಕೆ ಅನಿವಾರ್ಯವೆಂದು ಲಂಕಾ ಐಒಸಿ ಹೇಳಿದೆ.
ಶ್ರೀಲಂಕಾ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಹ ದರ ಏರಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ತಲುಪಿದ್ದು, ಇದರಿಂದ ಆಹಾರ, ತೈಲ, ಔಷಧ ಮುಂತಾದ ದೈನಂದಿನ ಅಗತ್ಯದ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ತೊಡಕಾಗಿದೆ. ತೈಲ ಖರೀದಿಸಲು ದೊಡ್ಡ ಕ್ಯೂನಲ್ಲಿ ನಿಂತಿದ್ದ ವೇಳೆ 4 ಮಂದಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ವಾರ ವರದಿಯಾಗಿದೆ.
ಪ್ರವಾಸೋದ್ಯಮವೇ ದ್ವೀಪರಾಷ್ಟ್ರ ಶ್ರೀಲಂಕಾಗೆ ಪ್ರಮುಖ ಆದಾಯದ ಮೂಲವಾಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿರುವ ಲಂಕಾದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ವಿದೇಶಿ ವಿನಿಮಯ ಉಳಿಸಿಕೊಳ್ಳುವ ಉದ್ದೇಶದಿಂದ 2020ರ ಮಾರ್ಚ್‌ನಲ್ಲಿ ಸರ್ಕಾರವು ಆಮದಿನ ಮೇಲೆ ನಿಷೇಧ ಹೇರಿತ್ತು. ಪರಿಣಾಮ ದೈನಂದಿನ ಬಳಕೆಯ ವಸ್ತುಗಳ ಕೊರತೆ ಎದುರಾಗಿದ್ದು, ಕಳೆದ ತಿಂಗಳು ಆಹಾರದ ದರ ಶೇ.25ರಷ್ಟು ಹೆಚ್ಚಾಗಿದ್ದರೆ, ಹಣದುಬ್ಬರದ ಪ್ರಮಾಣ ಶೇ.17.5ರಷ್ಟು ಏರಿಕೆಯಾಗಿದೆ.
ದ್ವೀಪರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆಗೆ ತೈಲದ ಕೊರತೆ ಎದುರಾಗಿರುವುದರಿಂದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಹೀಗಾಗಿ ದೇಶದೆಲ್ಲೆಡೆ ದಿನಕ್ಕೆ 5 ಗಂಟೆ ವಿದ್ಯುತ್ ಕಡಿತಕ್ಕೆ ಲಂಕಾ ಸರ್ಕಾರ ಆದೇಶಿಸಿದೆ. ಅಂತಾರಾಷ್ಟ್ರೀಯ ಸಾಲದ ಹೊರೆ ಹೆಚ್ಚಿರುವುದರಿಂದ ತುರ್ತು ಸಾಲಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಮನವಿ ಮಾಡಿರುವುದಾಗಿ ಸರ್ಕಾರ ಹೇಳಿದೆ.
PublicNext
27/03/2022 03:56 pm