ಬೆಂಗಳೂರು : ಕನ್ನಡ ಪರ ಸಂಘಟನೆಗಳು ನಾಳೆ.ಡಿ.5 ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ.
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಬಂದ್ ನಡೆಯಲಿದೆ.
ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿರುವ ಕನ್ನಡಪರ ಸಂಘಟನೆಗಳ ನಾಳಿನ ಬಂದ್ ನ್ನು ಯಶಸ್ವಿಗೊಳಿಸಲು ಹರಸಾಹಸ ಪಡುತ್ತಿವೆ.
ಇನ್ನೊಂದೆಡೆ ಸರ್ಕಾರ ಬಂದ್ ಗೆ ಯಾವುದೇ ಅವಕಾಶ ನೀಡುವುದಿಲ್ಲ. ಆದೇಶ ಮೀರಿ ಪ್ರತಿಭಟಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದೆ.
ಆದರೆ ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡಪರ ಹೋರಾಟಗಾರರು ನಾಳೆ ಬಂದ್ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ.
ಹಾಗಿದ್ರೆ ಬಂದ್ ವೇಳೆ ಎನ್ ಇರತ್ತೆ ಏನ್ ಇರಲ್ಲಾ ಎನ್ನುವ ಡಿಟೈಲ್ಸ್ ಇಲ್ಲಿದೆ ನೋಡಿ
ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಮರಾಠ ಅಭಿವೃದ್ದಿ ನಿಗಮ ರಚನೆ ಮಾಡುವುದಾಗಿ ಆದೇಶ ಹೊರಡಿಸಿತ್ತು.
ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ನವೆಂಬರ್ 30ರವರೆಗೆ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಮಾತ್ರ ಹೋರಾಟಗಾರರ ಗಡುವಿಗೆ ಮಣಿದಿಲ್ಲ.
ಕರ್ನಾಟಕ ಬಂದ್ ಗೆ ಕನ್ನಡ ರಕ್ಷಣಾ ವೇದಿಕೆ ಬೆಂಬಲ ನೀಡಿದೆ. ಜೊತೆಗೆ 50ಕ್ಕೂ ಹೆಚ್ಚು ಸಂಘಟನೆಗಳು ಬಹಿರಂಗವಾಗಿ ನಾಳಿನ ಬಂದ್ ಗೆ ಬೆಂಬಲ ನೀಡಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರೋಕ್ಷವಾಗಿ ಬಂದ್ ಗೆ ಬೆಂಬಲ ಸೂಚಿಸಿವೆ.
ಸಿಎಂ ಬಿಎಸ್ ಯಡಿಯೂರಪ್ಪ ಬಂದ್ ಮಾಡದಂತೆ ಕನ್ನಡಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪರ-ವಿರೋಧಗಳ ನಡುವೆ ನಾಳೆ ಬಂದ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ನಾಳೆ ಕರ್ನಾಟಕ ಬಂದ್ ನಡೆಯುವ ಹಿನ್ನೆಲೆ, ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಆದರೆ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ಗಳೂ ಸಹ ಎಂದಿನಂತೆ ಸಂಚಾರ ನಡೆಸಲಿದೆ ಎಂದು ತಿಳಿದು ಬಂದಿದೆ.
ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಓಲಾ, ಉಬರ್ ಚಾಲಕರ ಸಂಘವು ಬಂದ್ ಗೆ ಬೆಂಬಲ ನೀಡಿದೆ.
ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ.
ಬೀದಿ ಬದಿ ವ್ಯಾಪಾರಿಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಿವೆ.
ಇನ್ನು ಹೋಟೆಲ್ ಮಾಲೀಕರ ಸಂಘವು ಬಂದ್ ಗೆ ನೈತಿಕ ಬೆಂಬಲ ನೀಡಿದೆ.
PublicNext
04/12/2020 03:56 pm