ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಪಾರ್ಕಿಂಗ್ ಮಾಡೋದು ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಸಮಸ್ಯೆಯಾಗಿದೆ. ಅತ್ಯಂತ ಜನಜಂಗುಳಿಯ ಪ್ರದೇಶಗಳಲ್ಲಂತೂ ಪಾರ್ಕಿಂಗ್ ಜಾಗಕ್ಕಾಗಿ ಬೆಂಗಳೂರಿಗರು ಕಿಲೋ ಮೀಟರ್ ಗಟ್ಟಲೇ ಹೋಗಿ ತಡಕಾಡುತ್ತಾರೆ. ಕೆಲವೊಮ್ಮೆ ವಾಹನ ಚಾಲಕರು ಅಥವಾ ಮಾಲೀಕರು ಪಾರ್ಕಿಂಗ್ ವಿಷಯಕ್ಕಾಗಿಯೇ ಕಿತ್ತಾಡಿಕೊಂಡ ಬೇಕಾದಷ್ಟು ಉದಾಹರಣೆಗಳಿವೆ. ದಿನನಿತ್ಯ ಇಂತಹ ಕಿರಿಕಿರಿ ಅನುಭವಿಸುವ ಜನರಿಗೆ ಈಗ ಮತ್ತೊಂದು ಟೆನ್ಶನ್ ಶುರುವಾಗಿದೆ.
ಇನ್ಮುಂದೆ ರಸ್ತೆ ಬದಿಯಲ್ಲೋ, ಫುಟ್ ಪಾತ್ ಮೇಲೋ, ಖಾಲಿ ಸೈಟಿನಲ್ಲೋ ಅಥವಾ ಅನಧಿಕೃತ ಸ್ಥಳಗಳಲ್ಲಿ ನಿಮ್ಮ ಕಾರ್ ಅಥವಾ ಬೈಕ್ ನಿಲ್ಲಿಸುವ ಹಾಗಿಲ್ಲ. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಒಂದು ಕಾರಕುವಕ್ಕಾದ ಮಾರ್ಗಸೂಚಿ ಹೊರಡಿಸಲಿದ್ದಾರೆ. ಈ ಒಂದು ಕಠಿಣ ಕಾನೂನಿಗೆ ಹೊಸ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಡಿಪಾಯ ಹಾಕಲಿದ್ದಾರೆ. ಹೊಸ ವಾಹನ ಖರೀದಿಗೆ ಕಡ್ಡಾಯವಾಗಿ ಬಿಬಿಎಂಪಿ ಅನುಮತಿ ಪಡೆಯಲೇಬೇಕು. ಬಿಬಿಎಂಪಿ ಅನುಮತಿ ಸಿಕ್ಕ ಮೇಲಷ್ಟೇ ವಾಹನ ನೋಂದಣಿ ಸಾಧ್ಯ. ಈ ತರಹದ ಕಠಿಣ ರೂಲ್ಸ್ ತರ್ತಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ರೆ ಹೊಸ ವೆಹಿಕಲ್ ಖರೀದಿಗೆ ಅನುಮತಿಯೇ ಸಿಗೋದಿಲ್ಲ.
ಪಾಲಿಕೆಗೆ ಕಮಿಟ್‍ಮೆಂಟ್ ಲೆಟರ್ ಕೊಟ್ಟರೆ ಮಾತ್ರ ಖರೀದಿಗೆ ಒಪ್ಪಿಗೆ ಸಿಗುತ್ತದೆ. ಮನೆ ಒಳಗೆ, ಪಾರ್ಕಿಂಗ್ ಸ್ಥಳದಲ್ಲಿ ನಾನು ನನ್ನ ವಾಹನ ನಿಲ್ಲಿಸುತ್ತೇನೆ ಅನ್ನುವ ಪತ್ರ ಕೊಡಲೇಬೇಕು. ಇಲ್ಲವಾದಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲೇ ವಾಹನ ಪಾರ್ಕಿಂಗ್ ಆಗಬೇಕು. ಮನೆ ಮುಂದಿನ ರೋಡ್, ಮುಖ್ಯರಸ್ತೆಗಳ ಅಕ್ಕ-ಪಕ್ಕ ಪಾರ್ಕ್ ಮಾಡುವಂತಿಲ್ಲ.
ನಿಮ್ಮದೇ ಏರಿಯಾದ ಸರ್ಕಾರಿ, ಖಾಸಗಿ ಖಾಲಿ ಸೈಟ್‍ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ಈ ಕುರಿತು ಸೈಟ್ ಮಾಲೀಕರ ಜತೆ ಚರ್ಚೆ ನಡೆಸಿ ಸ್ಥಳಾವಕಾಶ ಕಲ್ಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಪಾರ್ಕಿಂಗ್ ಕುರಿತ ಸಮಿತಿ ವರದಿ ನಂತರ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
PublicNext
02/12/2020 07:48 am