ಗದಗ: ಬರಗಾಲದಿಂದ ಬೆಂದಿದ್ದ ಆ ರೈತರು, ಮೊದ್ಲು ಕಾಲುವೆ ನಿರ್ಮಾಣವಾಗಿ ನೀರು ಬಂದ್ರೆ ಸಾಕಪ್ಪಾ ಅಂತಿದ್ರು. ಆದ್ರೆ ಈಗ ಯಾಕಪ್ಪ ಕಾಲುವೆ ನಿರ್ಮಾಣವಾಯಿತು ಅಂತ ಗೋಳಾಡುತ್ತಿದ್ದಾರೆ. ಕಳಪೆ ಕಾಮಗಾರಿ ಕಾಲುವೆಯಿಂದ ಗುಪ್ತಗಾಮಿನಿಯಂತೆ ಹರಿಯುವ ನೀರು ಆ ಅನ್ನದಾತರ ಖುಷಿ ಕಿತ್ತುಕೊಂಡಿದೆ. ನೂರಾರು ಎಕರೆ ಭೂಮಿ ಹಾಳಾಗಿ ಹೋಗಿದೆ. ಗದಗ ಜಿಲ್ಲೆಯ ಅನ್ನದಾತರ ಕಣ್ಣೀರಿನ ಕುರಿತಾದ ಒಂದು ವರದಿ ಇಲ್ಲಿದೆ..
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರ ನೂರಾರು ಎಕರೆ ಭೂಮಿ ಬರ್ಬಾದ್ ಆಗಿ ಹೋಗಿದೆ. ಶಿಂಗಟಾಲೂರು ಏತ ನೀರಾವರಿಯ ಎಡದಂಡೆ ಕಾಲುವೆ ಈ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಾಲುವೆ ನೀರು ಬಳಸಿಕೊಂಡು ಬೆಳೆ ಬೆಳೆಯಬಹುದು ಅಂತಾ ರೈತ್ರು ನಿರೀಕ್ಷೆಯಲ್ಲಿದ್ರು. ಆದ್ರೆ ಕಾಲುವೆಯ ಕಳಪೆ ಕಾಮಗಾರಿಯಿಂದ ನಿರಂತರ ನೀರು ಸೋರುವಿಕೆ ಆಗ್ತಿದೆ. ಕಾಲುವೆ ಎತ್ತರ ಹೆಚ್ಚಿಸುವ ಬ್ಯಾಂಕಿಂಗ್ ಕಾಮಗಾರಿಯಲ್ಲಿ ಕಳಪೆಯಾಗಿದೆ. ಇದರಿಂದ ನೀರು ಸೋರಿಕೆಯಾಗ್ತಿದ್ದು, ರೈತರ ಬೆಳೆ ನಾಶವಾಗ್ತಿವೆ ಎಂಬ ಆರೋಪ ರೈತರದ್ದಾಗಿದೆ.
ಮುಂಡರಗಿ ತಾಲೂಕಿನ ಸಾವಿರಾರು ಎಕರೆ ಜಮೀನುಗಳಿಗೆ ನೀರಿನ ಅನುಕೂಲ ಹಾಗೂ ಆ ಭಾಗದ ಕೆರೆ ತುಂಬಿಸುವ ಉದ್ದೇಶ ಇದಾಗಿತ್ತು. 2011 ರಲ್ಲಿ ಕಾಲುವೆ ಕಾಮಗಾರಿ ಆರಂಭವಾಯಿತು. ಚುನಾವಣೆ ಹಿನ್ನಲೆ ಕಳೆದ 2017 ರ ವೇಳೆಗೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ನೀರು ಹರಿಬಿಡಲಾಗಿದೆ. ಆಗಿನಿಂದ ಈಗಿನವರೆಗೆ ಜಮೀನಿಗೆ ನೀರು ಸೋರಿಕೆ ಆಗ್ತಾನೆ ಇದೆ. ಎಸ್.ಎಮ್ ಬಿರಾದಾರ್ ಎಂಬ ಗುತ್ತಿಗೆದಾರರಿಗೆ ಕಾಮಗಾರಿಯ ಟೆಂಡರ್ ನೀಡಲಾಗಿತ್ತು. ಇವರು ಮಾಡಿರೋ ಕಾಮಗಾರಿ ಕಳಪೆಯಾಗಿದೆ ಎಂಬುದು ರೈತರ ಆರೋಪ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ರೈತರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಸಂಬಂಧಿಸಿ ಬಾರಿ ನೀರಾವರಿ ಇಲಾಖೆಗೆ ಕಾಲುವೆ ದುರಸ್ತಿ ಹಾಗೂ ಪರಿಹಾರಕ್ಕೆ ಕಳುಹಿಸಲಾಗಿದೆ ಅಂತಿದ್ದಾರೆ ಜಿಲ್ಲಾಧಿಕಾರಿಗಳು.
ಒಟ್ಟಾರೆ ಡೋಣಿ ಗ್ರಾಮದ 50ರಿಂದ 60 ರೈತರ ಸಮಸ್ಯೆ ಇದಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಕಾಲುವೆ ಸೋರಿಕೆಯಾಗದಂತೆ ತಡೆಗಟ್ಟಬೇಕು, ರೈತರಿಗೆ ಸೂಕ್ತ ಪರಿಹಾರ ನೀಡಲಿ ಎಂಬುದು ಎಲ್ಲರ ಆಶಯ..
PublicNext
17/08/2022 10:29 pm