ರಾಂಚಿ (ಜಾರ್ಖಂಡ್): ದೌರ್ಜನ್ಯ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು. ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇರುವ ಕಾರಣದಿಂದ ಹಲವಾರು ಕಾನೂನುಗಳು ಮಹಿಳೆಯರ ಪರವಾಗಿ ಜಾರಿಗೆ ಬಂದಿವೆ. ಆದರೆ ಮಹಿಳೆಯರಷ್ಟೇ ಪ್ರಮಾಣದಲ್ಲಿ ಪುರುಷರೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಮಹಿಳೆಯರು ದೌರ್ಜನ್ಯದ ವಿರುದ್ಧ ಇದಾಗಲೇ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪುರುಷರು ಕೂಡ ಸಂಘಟನೆಗಳನ್ನು ರಚಿಸಿಕೊಂಡಿದ್ದಾರೆ. ಇದೀಗ ಪುರುಷ ಆಯೋಗ ರಚನೆಗೆ ಒತ್ತಾಯಿಸಿ ಜಾರ್ಖಂಡ್ನ ರಾಂಚಿಯಲ್ಲಿ ಪುರುಷರಿಂದ ಭಾರಿ ಪ್ರತಿಭಟನೆ ಆರಂಭವಾಗಿದೆ.
ಗಾಂಧಿ ಜಯಂತಿಯ ದಿನವಾದ ನಿನ್ನೆ ರಾಂಚಿಯಲ್ಲಿ ಗಾಂಧಿ ಪ್ರತಿಮೆಯ ಮುಂದೆ ಹಲವರು ಪುರುಷರು ಮಹಿಳೆಯರಿಂದ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಮಹಿಳಾ ಆಯೋಗದಂತೆ ಪುರುಷ ಆಯೋಗವನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.
‘ಭಾರತೀಯ ಕುಟುಂಬವನ್ನು ಉಳಿಸಿ’ ಎಂಬ ಘೋಷಣೆಯಡಿ ನೂರಾರು ಪುರುಷರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರಿಂದ ಆಗುತ್ತಿರುವ ದೌರ್ಜನ್ಯ ಒಂದೆಡೆಯಾದರೆ, ಮಹಿಳೆಯರಾಗಿ ಜಾರಿಗೆ ಬಂದಿರುವ ಕೆಲವು ಕಾನೂನುಗಳ ದುರ್ಬಳಕೆ ಆಗುತ್ತಿದ್ದು, ಈ ಕಾನೂನುಗಳ ಪ್ರಯೋಜನ ಪಡೆದು ಮಹಿಳೆಯರು ಹೇಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಾರೆ ಈ ಪುರುಷರು.
ವರದಕ್ಷಿಣೆ ತಡೆ ಕಾಯ್ದೆ, ಜೀವನಾಂಶ ನೀಡುವ ಸೆಕ್ಷನ್ 498 ಮತ್ತು ಸೆಕ್ಷನ್ 125 ರ ದುರುಪಯೋಗ ಆಗುತ್ತಿವೆ. ಮಹಿಳೆಯರು ಸುಳ್ಳು ದೂರು ನೀಡಿ ಪತಿಯಂದಿರನ್ನು ಜೈಲಿಗೆ ಹಾಕಿಸುತ್ತಿದ್ದಾರೆ. ಇದರಿಂದ ವೈಯಕ್ತಿಕ ಭದ್ರತೆಗೆ ಚ್ಯುತಿ ಬಂದಿದ್ದು, ತಮಗಾಗಿ ಆಯೋಗ ರಚಿಸಬೇಕು ಎಂದು ಪ್ರತಿಭಟನೆ ವೇಳೆ ಗಂಡಸಲು ಅಳಲು ತೋಡಿಕೊಂಡಿದ್ದಾರೆ.
ತಂತಮ್ಮ ಪತ್ನಿಯಿಂದ ದೌರ್ಜನ್ಯ ಅನುಭವಿಸುತ್ತಿರುವ ಪತಿಯ ಕಣ್ಣೀರು ನೋಡುವವರೇ, ಅವರ ನೋವು ಕೇಳುವವರೇ ಇಲ್ಲವಾಗಿದೆ. ಅದಕ್ಕಾಗಿಯೇ ಆಯೋಗ ರಚನೆಗೆ ಕೋರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.
PublicNext
03/10/2022 05:33 pm